Index   ವಚನ - 66    Search  
 
ಸುಮನ ಸುಬುದ್ಧಿ ಭಕ್ತಿಸ್ಥಲ; ಮಲ ಅಮಲ ಮಹೇಶ್ವರಸ್ಥಲ; ಅಜ್ಞಾನ ಸುಜ್ಞಾನ ಪ್ರಸಾದಿಸ್ಥಲ; ಉಭಯ ಕೂಟಸ್ಥವೆಂಬುದ ಪರಿಹರಿಸಿದಲ್ಲಿ ಪ್ರಾಣಲಿಂಗಿಸ್ಥಲ; ಸ್ತುತಿ ನಿಂದ್ಯಾದಿಗಳಲ್ಲಿ ಒಡಲಳಿದುನಿಂದುದು ಶರಣಸ್ಥಲ; ಇಂತೀ ಪಂಚಭೇದಂಗಳ ಸಂಚವನರಿತು ವಿಸಂಚವಿಲ್ಲದೆ, ಪರುಷ ಪಾಷಾಣದಂತೆ ಭಿನ್ನಭಾವವಿಲ್ಲದೆ ಅರಿದರುಹಿಸಿಕೊಂಬ ಕುರುಹು ಏಕವಾದಲ್ಲಿ ಐಕ್ಯಸ್ಥಲ. ಎನ್ನಯ್ಯಾ, ಎನ್ನ ನಿನ್ನ ಷಟ್‍ಸ್ಥಲ ಇದಕ್ಕೆ ಭಿನ್ನಭಾವವಿಲ್ಲ; ಅದು ಎನ್ನ ನಿನ್ನ ಕೂಟದ ಸುಖದಂತೆ. ಇದ ಚೆನ್ನಾಗಿ ತಿಳಿದು ನೋಡಿಕೊಳ್ಳಿ. ಅಲ್ಲಿ ಇಲ್ಲಿ ಎಂಬ ಗೆಲ್ಲಗೂಳಿತನ ಬೇಡ ಹಾಗೆಂಬಲ್ಲಿಯೆ ಬಯಲಾಗಬೇಕು, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನಲ್ಲಿ.