Index   ವಚನ - 4    Search  
 
ಅಯ್ಯಾ ಪುಣ್ಯಪಾಪ, ಇಹಪರಂಗಳಿಗೆ ಹೊರಗಾದ ಶಿಷ್ಯ-ಗುರು-ಜಂಗಮದ ವಿಚಾರವೆಂತೆಂದಡೆ: ತನ್ನ ತಾನೆ ಪಕ್ವವಾಗಿ, ವೃಕ್ಷವ ತನ್ನೊಳಗೆ ಮಾಡಿಕೊಂಡು, ಶಿವಾಜ್ಞೆಯಿಂದ ತೊಟ್ಟು ಬಿಟ್ಟ ಹಣ್ಣಿನಂತೆ ಶಿವಭಕ್ತಮತ ಮೊದಲಾಗಿ ಆವ ಜಾತಿಯಲ್ಲಿ ಜನಿತವಾದಡೇನು ಪೂರ್ವಗುಣಧರ್ಮಗಳ ಮುಟ್ಟದೆ, ಲೋಕಾಚಾರವ ಹೊದ್ದದೆ, ಪಂಚಮಹಾಪಾತಕಂಗಳ ಬೆರಸದೆ, ಸತ್ಯಶರಣರಸಂಗ, ಸತ್ಯ ನಡೆನುಡಿಯಿಂದಾಚರಿಸಿ, ಲಿಂಗಾಚಾರ ಮೋಹಿಯಾಗಿ, ಅಡಿಗೆರಗಿ ಬಂದ ಪೂರ್ವಜ್ಞಾನಿ ಪುನರ್ಜಾತಂಗೆ, ಪಕ್ಷಿ ಫಳರಸಕ್ಕೆರಗುವಂತೆ ಮೋಹಿಸಿ, ಅಂಗದ ಮಲಿನವ ತೊಡೆದು ಚಿದಂಗವ ಮಾಡಿ, ಚಿದ್ಘನಲಿಂಗವ ಸಂಬಂಧಿಸಿ, ಇಪ್ಪತ್ತೊಂದು ದೀಕ್ಷೆಯ ಕರುಣಿಸುವಾತನೆ ತ್ರಿಣೇತ್ರವುಳ್ಳ ಗುರುವೆಂಬೆನಯ್ಯಾ. ಅಂಥ ಗುರುಕರಜಾತನ ಭೇದಿಸಿ, ತ್ರಿವಿಧ ಜಪವ ಹೇಳಿ, ತ್ರಿವಿಧಲಿಂಗಾನುಭಾವವ ಬೋಧಿಸುವಾತನೆ ಸರ್ವಾಂಗಲೋಚನವುಳ್ಳ ಜಂಗಮವೆಂಬೆ ನೋಡಾ. ಇಂಥ ಸನ್ಮಾರ್ಗಿಗಳಿಗೆ ಭವಬಂಧನ ನಾಸ್ತಿ ಕಾಣಾ ಶಂಭುಜಕ್ಕೇಶ್ವರಾ.