Index   ವಚನ - 4    Search  
 
ಅಂಗೈಯ ಲಿಂಗವ ಕಂಗಳು ತುಂಬಿ ನೋಡಿ ಮನ ಹಾರೈಸಿದಲ್ಲಿ ಅಂಗೇಂದ್ರಿಯಂಗಳೆಲ್ಲ ಲಿಂಗೇಂದ್ರಿಯಂಗಳಾದವು. ಅಂಜದಿರು ಮನವೇ, ಲಿಂಗವು ನಿನಗೆ ದೂರನೆಂದು. ಮನೋಮಧ್ಯದೊಳಿಪ್ಪ, ಅಂಗದ ಕಂಗಳಲಿಪ್ಪ, ಭಾವದ ಪ್ರಾಣದಲ್ಲಿಪ್ಪ. ಅಂಗಪ್ರಾಣಭಾವ ಸರ್ವಾಂಗಲಿಂಗವಾದ ಬಳಿಕ, ಲಿಂಗಮಧ್ಯಪ್ರಾಣ, ಪ್ರಾಣಮಧ್ಯಲಿಂಗ. ಇದು ಕಾರಣ ಉತ್ಪತ್ತಿಸ್ಥಿತಿಲಯವುಂಟೆಂದು ಅಂಜದಿರು. ಅಂಜಿಕೆ ಇಲ್ಲ, ಅಳುಕಿಲ್ಲ, ಬಂದುದೇ ಲಿಂಗದ ಲೀಲೆ, ಇದ್ದುದೇ ಲಿಂಗದಾನಂದ, ಭಾವಲೀಯವಾದುದೇ ಲಿಂಗನಿರವಯವು. ಇದು ಸತ್ಯ, ಶಿವ ಬಲ್ಲ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.