Index   ವಚನ - 11    Search  
 
ಅಗ್ನಿಮುಟ್ಟಲು ತೃಣವಗ್ನಿಯಪ್ಪುದು ತಪ್ಪದಯ್ಯ. ಗುರುಪ್ರಸಾದವಂಗವ ಸೋಂಕಿದಲ್ಲಿ ಸರ್ವಾಂಗ ಗುರುವಪ್ಪುದು ತಪ್ಪದಯ್ಯ. ಲಿಂಗಪ್ರಸಾದ ಮನವ ಸೋಂಕಿದಲ್ಲಿ ಮನ ಲಿಂಗವಪ್ಪುದು ತಪ್ಪದಯ್ಯ. ಜಂಗಮಪ್ರಸಾದ ಅರಿವ ಸೋಂಕಿದಲ್ಲಿ ಅಖಂಡಿತ ಪ್ರಸನ್ನಪ್ರಸಾದವಪ್ಪುದು ತಪ್ಪದಯ್ಯ. ಶಿವಶಿವಾ, ಪ್ರಸಾದದ ಮಹಿಮೆಯನೇನೆಂದುಪಮಿಸುವೆ? ಪ್ರಸಾದವೇ ಗುರು, ಪ್ರಸಾದವೇ ಲಿಂಗ, ಪ್ರಸಾದವೇ ಜಂಗಮ, ಪ್ರಸಾದವೇ ಪರಾತ್ಪರ, ಪ್ರಸಾದವೇ ಪರಮಾನಂದ, ಪ್ರಸಾದವೇ ಪರಮಾಮೃತ, ಪ್ರಸಾದವೇ ಪರಮಜ್ಞಾನ, ಪ್ರಸಾದವೇ ವಾಙ್ಮನೋತೀತ, ಪ್ರಸಾದವೇ ನಿತ್ಯಪರಿಪೂರ್ಣ. ಇಂತಪ್ಪ ಪ್ರಸಾದವ ಕೊಂಡು ಬದುಕಿದೆನಯ್ಯ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.