Index   ವಚನ - 15    Search  
 
ಅನುಭಾವ ಬಲ್ಲೆನೆಂಬಣ್ಣಗಳು ನೀವು ಕೇಳಿರೇ: 'ಅನು'ವೆಂದಡಾವುದು? 'ಭಾವ'ವೆಂದಡಾವುದು ಬಲ್ಲರೆ ನೀವು ಹೇಳಿರೆ. ಅಮಿತಿ ಬ್ರಹ್ಮ ಸನ್ಮಾತ್ರಂ ನುಕಾರಂ ಜೀವರುಚ್ಯತೇ ಎಂದಾ ಸ್ಥಲಕ್ಕೆ ಸ್ಥಲವಿಡಬಲ್ಲರೆ ಕೇಳಿರೇ. 'ಪ್ರ'ವೆಂದಡಾವುದು? 'ಸಂಗ'ವೆಂದಡಾವುದು ಬಲ್ಲರೆ ನೀವು ಹೇಳಿರೆ. ಇಹಲೋಕ ಬಾಹ್ಯಕ್ತಾನಾಂ ಅಂತರಂ ಪರಲೋಕವೋ ಇಷ್ಠ ಪ್ರಾಣ ಸಂಯುಕ್ತೇ ಚ ಪ್ರಸಂಗಸ್ಯರುಚೋರ್ಧಯೇ ಎಂದಾ ಸ್ಥಲಕ್ಕೆ ಸ್ಥಲವಿಡಬಲ್ಲಡಾತನೆ ಪ್ರಸಂಗಿ. ಗೋಷ್ಠಿಯ ಬಲ್ಲೆನೆಂಬಣ್ಣ ನೀವು ಕೇಳಿರೇ: 'ಗೋ'ವೆಂದಡಾವುದು, 'ಷ್ಠಿ' ಯೆಂದಡಾವುದು ನೀವು ಕೇಳಿರೇ: ದಳ ಸಹಸ್ರ ಸಂವೇದೀ ಗೋವಿರ್ಯೋಧಾರಣಂ ಭವೇತ್ ಗೋವುರ್ದ್ಧೆಷ್ಟಿ ಯತ್ರಸಂಯುಕಂ ತತ್ರ ಗೋಷ್ಠಿಸ್ಯ ನಿರ್ಣಯಃ ಎಂದಾ ಸ್ಥಲಕ್ಕೆ ಸ್ಥಲವಿಡಬಲ್ಲಡಾತನೆ ಗೋಷ್ಠಿವಂತನು. ಇದನರಿಯದೆ ವೇದ ಶಾಸ್ತ್ರ ಪುರಾಣಾಗಮಂಗಳ ಕಲಿತು ಲೋಗರ ಮೆಚ್ಚಿಸುವ ಇವರೇನು ಹಿರಿಯರು ಡೊಂಬನೇನು ಕಿರಿಯನೆ? ಇದರಿಂದ ಓದ ಬಲ್ಲಾತ ವೇದವನರಿಯ, ವೇದವ ಬಲ್ಲಾತ ಶಾಸ್ತ್ರವನರಿಯ, ಶಾಸ್ತ್ರ ಬಲ್ಲಾತ ಪುರಾಣವನರಿಯ, ಆಗಮವ ಬಲ್ಲಾತ ಯೋಗವನರಿಯ, ಯೋಗವನರಿಯಬಲ್ಲಾತ ಶಬ್ದವನರಿಯ, ಶಬ್ದವ ಬಲ್ಲಾತ ಸಂಸ್ಕೃತವನರಿಯ, ಸಂಸ್ಕೃತ ಬಲ್ಲಾತ ತತ್ವವನರಿಯ, ತತ್ವವ ಬಲ್ಲಾತ ಪರತತ್ವವನರಿಯ, ಪರತತ್ವವ ಬಲ್ಲ ಶರಣನೆ ಸರ್ವನೆಲ್ಲ ಬಲ್ಲ ಕಾಣಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.