ಅಮೃತದೊಳಗೆ ಜನಿಸಿ ಅಮೃತದೊಳಗೆ ವರ್ತಿಸುವ
ಅಮೃತದೇಹಿಗೆ ಹಸಿವು ತೃಷೆಯೆ?
ಆ ಅಮೃತವೆ ಆಹಾರ, ಆ ಅಮೃತವೆ ಸೇವನೆ,
ಬೇರೊಂದು ವಸ್ತುವುಂಟೆ? ಇಲ್ಲ.
ಆ ಅಮೃತವೇ ಸರ್ವಪ್ರಯೋಗಕ್ಕೆ.
ಇದಕ್ಕೆ ಕಟ್ಟಳೆಯುಂಟೆ? ಕಾಲವುಂಟೆ?
ಆಜ್ಞೆ ಉಂಟೆ? ಬೇರೆ ಕರ್ತರುಂಟೆ? ಇಲ್ಲ.
ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ.
ಶ್ರೀಗುರುಲಿಂಗದಲ್ಲಿ ಜನಿಸಿ,
ಶಿವಲಿಂಗದಲ್ಲಿ ಬೆಳೆದು
ಜಂಗಮಲಿಂಗದಲ್ಲಿ ವರ್ತಿಸಿ,
ಪ್ರಸಾದಲಿಂಗದಲ್ಲಿ ಪರಿಣಾಮಿಸಿ,
ಗುರು ಲಿಂಗ ಜಂಗಮ ಪ್ರಸಾದ ಒಂದೆಂದರಿದು
ಆ ಚತುರ್ವಿಧ ಏಕವಾದ ಲಿಂಗವೇ ಪ್ರಾಣ,
ಪ್ರಾಣವೇ ಲಿಂಗ
ಲಿಂಗವೇ ಅಂಗ, ಅಂಗವೆ ಲಿಂಗವಾದ
ಲಿಂಗಸ್ವಾಯತವಾದ ಲಿಂಗೈಕ್ಯಂಗೆ
ಜಪ ಧ್ಯಾನ ತಪಕ್ಕೆ ಅರ್ಚನೆಗೆ ಪೂಜನೆಗೆ
ಆಗಮವುಂಟೆ? ಕಾಲವುಂಟೆ?
ಕರ್ಮವುಂಟೆ? ಕಲ್ಪಿತವುಂಟೆ? ಇಲ್ಲ.
ಸರ್ವವೂ ಲಿಂಗಮಯ.
ಆ ಲಿಂಗವಂತಂಗೆ ನಡೆದುದೇ ಆಗಮ,
ಪೂಜಿಸಿದುದೇ ಕಾಲ
ಮಾಡಿದುದೇ ಕ್ರಿಯೆ, ನುಡಿದುದೇ ಜಪ,
ನೆನೆದುದೇ ಧ್ಯಾನ
ವರ್ತಿಸಿದುದೇ ತಪಸ್ಸು.
ಇದಕ್ಕೆ ಅವಧಿಯುಂಟೆ? ಮೇರೆಯುಂಟೆ? ಇಲ್ಲ.
ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ.
ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ರವಿ, ಶಶಿ, ಆತ್ಮ
ಮನೋವಾಕ್ಕಾಯ ಹೊನ್ನು ಹೆಣ್ಣು ಮಣ್ಣು
ಮೊದಲಾದ ಸರ್ವಪದಾರ್ಥವನರ್ಪಿಸಿ,
ಗುರು ಲಿಂಗ ಜಂಗಮದ ಪ್ರಸನ್ನತೆಯ
ಪಡೆದ ಮಹಾಪ್ರಸಾದಿಗೆ
ಸರ್ವವೂ ಪ್ರಸಾದವಲ್ಲದೆ ಮತ್ತೊಂದಿಲ್ಲ.
ಆ ಪ್ರಸಾದಿಗೆ ಪದಾರ್ಥವೆಂಬ ಪ್ರಸಾದವೆಂಬ ಭೇದವುಂಟೆ?
ಅರ್ಪಿತವೆಂಬ ಅನರ್ಪಿತವೆಂಬ ಸಂದೇಹವುಂಟೆ?
ಕೊಡುವಲ್ಲಿ ಕೊಂಬಲ್ಲಿ ಸೀಮೆಯುಂಟೆ?
ನಿಸ್ಸೀಮಪ್ರಸಾದಿಗೆ ಸರ್ವವೂ ಪ್ರಸಾದ.
ಆ ಭೋಗಕ್ಕೆ ಮೇರೆ ಉಂಟೆ? ಅವಧಿಯುಂಟೆ? ಇಲ್ಲ.
ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ.
ವೇದ ಶಾಸ್ತ್ರ ಆಗಮ ಪುರಾಣ ಮೊದಲಾದ ಸರ್ವವಿದ್ಯಂಗಳ
ತಾತ್ಪರ್ಯ ಮರ್ಮ ಕಳೆಗಳನರಿದ ಮಹಾಜ್ಞಾತೃವಿಂಗೆ
ಆ ಮಹಾಜ್ಞಾನವೇ ದೇಹ, ಆ ಮಹಾಜ್ಞೇಯವೇ ಪ್ರಾಣ.
ಈ ಮಹತ್ತಪ್ಪ ಜ್ಞಾತೃ ಜ್ಞಾನ ಜ್ಞೇಯ ಒಂದಾದ
ಮಹಾಬೆಳಗಿನ ಸುಖಸ್ವರೂಪಂಗೆ
ಮರ್ತ್ಯ ಸ್ವರ್ಗ ದೇವಲೋಕವೆಂಬ ಫಲಪದದಾಸೆಯುಂಟೆ? ಇಲ್ಲ.
ನಿರಂತರ ತೇಜೋಮಯ ಸುಖಸ್ವರೂಪನು
ವಿದ್ಯಾಸ್ವರೂಪನು ನಿತ್ಯಾನಂದಸ್ವರೂಪನು.
ಆ ಮಹಾಮಹಿಮನ ಮಹಾಸುಖಕ್ಕೆ
ಅವಧಿಯುಂಟೆ? ಮೇರೆಯುಂಟೆ? ಇಲ್ಲ.
ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ.
ಆ ಮಹಾನುಭಾವಿ ತಾನೆ ಕೇವಲ ಜ್ಯೋತಿರ್ಮಯಲಿಂಗವಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.