ಅರಿಯದ ಕಾರಣ ಭವಕ್ಕೆ ಬಂದರು.
ಅರಿವಿಲ್ಲದವಂಗೆ ಆಚಾರವಿಲ್ಲ,
ಆಚಾರವಿಲ್ಲದವಂಗೆ ಅರಿವಿಲ್ಲ.
ಅರಿವಿಲ್ಲದವಂಗೆ ಗುರುವಿಲ್ಲ,
ಗುರುವಿಲ್ಲದವಂಗೆ ಲಿಂಗವಿಲ್ಲ.
ಲಿಂಗವಿಲ್ಲದವಂಗೆ ಜಂಗಮವಿಲ್ಲ,
ಜಂಗಮವಿಲ್ಲದವಂಗೆ ಪ್ರಸಾದವಿಲ್ಲ.
ಪ್ರಸಾದವಿಲ್ಲದವಂಗೆ ಮಹಾಲಿಂಗವಿಲ್ಲವಯ್ಯಾ.
ಈ ಆರು ಸಹಿತ ಆಚಾರ, ಆಚಾರಸಹಿತ ಗುರು
ಗುರುಸಹಿತ ಲಿಂಗ, ಲಿಂಗಸಹಿತ ಜಂಗಮ
ಜಂಗಮಸಹಿತ ಪ್ರಸಾದ,
ಪ್ರಸಾದಸಹಿತ ಮಹಾಲಿಂಗ.
ಆದಿಲಿಂಗ ಅನಾದಿಶರಣನಾಗಿಬಂದು
ಷಡುಸ್ಥಲವ ನಡೆದು ತೋರಿದ.
ಅಂತಲ್ಲದೆ ಒಂದೊಂದ ಕಳೆದು ನಡೆದನೆಂದಡೆ
ಸೋಪಾನದ ಕಟ್ಟೆಯ ಕಲ್ಲು ಬಿದ್ದಂತೆ.
ಇದು ಆರಿಗೂ ಅಳವಡದು ಬಸವಣ್ಣಂಗಳವಟ್ಟಿತ್ತು.
ಆ ಬಸವಣ್ಣನ ಭೃತ್ಯನಾಗಿರಿಸಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.