Index   ವಚನ - 39    Search  
 
ಆಚಾರಕರ್ಪರ, ವಿಚಾರಕರ್ಪರ, ಅವಿಚಾರಕರ್ಪರದ ನಿರ್ಣಯವಾವುದೆನಲು, ಅನ್ಯದೈವ ಭವಿಮಿಶ್ರ ಅನಾಚಾರ ಭಕ್ಷಾಭಕ್ಷ ಪೇಯಾಪೇಯ ಅನ್ಯಾಯ ಇಂತಿವರನುಸರಣಿಗೊಳ್ಳದೆ ವಿಚಾರಿಸಿ ಭಕ್ತರ ಗೃಹವ ಹೋಗುವುದೀಗ ಆಚಾರಕರ್ಪರ. ನಾನಾರೊ? ಎಂದು ವಿಚಾರಿಸಿ ತನಗೆ ಮುಸುಕಿದ ಮಾಯಾಪಟಲದ ಭ್ರಮೆಯಂ ಪರಿದು ಶ್ರೀಗುರುವಿನ ಸದ್ಭಾವಜ್ಞಾನಮನಕರಣದಿಂ ಉದಯಿಸಿದವನಜಾತಸ್ವಯಂಭುವೆಂದರಿದು, ಆಶೆಯಾಮಿಷ ಕಾಯಗುಣ ಇಂದ್ರಿಯದುರವಣೆ ಮನೋವಿಕಾರಾದಿಗಳಿಗೆ ಸಿಲ್ಕದೆ, ಆ ಮನ ಮೊದಲಾದ ಕಾರಣಂಗಳ ತನ್ನರಿವಿನಾಜ್ಞೆಯಿಂ ಲಿಂಗದಲ್ಲಿ ನೆನಹು ನೆಲೆಗೊಳಿಸಿ, ನೋಟವನಿಮಿಷವೆನಿಸಿ, ಅನ್ಯನುಡಿ ಅನ್ಯನಡೆಯೆಲ್ಲಮಂ ಮುನ್ನವೆ ತ್ಯಜಿಸಿ, ಲಿಂಗದ ನಡೆ ನುಡಿ ಚೈತನ್ಯವಳವಟ್ಟು, ಪರಶಿವನ ಪರತತ್ವವೆ ಪರಮಕರ್ಪರ ವಿಷಯ, ಶಿಕ್ಷಾದಂಡವೆ ಕಟ್ಟಿಗೆ, ಪಂಚಭೂತಕಾಯವನುಳಿದ ಅಕಾಯವೆ ಕಂಥೆ, ಪರಮವೈರಾಗ್ಯವೆ ಯೋಗವಟ್ಟಿಗೆ, ನಿರಾಶಾಪಥವೆ ಯೋಗವಾವುಗೆ, ನಿಷ್ಕಾಮಿತವೆ ಒಡ್ಯಾಣ. ಬಿಂದುಚಲಿಸಿದ ಸಂಧಾನಗತಿ ನಿಂದು ಲಿಂಗಸಂಯೋಗದ ಸಮರತಿಯ ಮುಕ್ತ್ಯಂಗನೆಯೆನಿಸುವ ಚಿಚ್ಛಕ್ತಿಯ ಕೂಟದ ಊರ್ಧ್ವರೇತಸ್ಸಿನ ಪರಮವಿಶ್ರಾಂತಿಯೆ ಕೌಪೀನ, ಅಪ್ರಮಾಣ ಚಾರಿತ್ರ್ಯವೆ ಆಧಾರಘುಟಿಕೆ, ಲಿಂಗಗಂಭೀರದ ಮಹದೈಶ್ವರ್ಯವೆ ವಿಭೂತಿ, ನಿರುಪಾಧಿಕ ತೇಜೋಮಯವಾದ ಮಹಾಲಿಂಗದ ಪ್ರಕಾಶವೆ ಭಸ್ಮೋದ್ಧೂಳನಾಗಿ, ಆ ಭಸ್ಮೋದ್ಧೂಳನ ಪ್ರಕಾಶದಿಂ ಅಜ್ಞಾನತಮವಳಿದ ಸಜ್ಞಾನಕ್ಷೇತ್ರದಲ್ಲಿ ಸುಳಿವ ಸುಳುಹೆ ದೇಶಾಂತರವಾಗಿ ಚರಿಸುವುದೆಂತೆಂದಡೆ: 'ಜಂಗಮಸ್ಯ ಗೃಹಂ ನಾಸ್ತಿ ಸ ಗಚ್ಛೇತ್ ಭಕ್ತಮಂದಿರಂ ಯದಿ ಗಚ್ಛೇತ್ ಭವೇರ್ಗೇಹಂ ತದ್ಧಿಗೋಮಾಂಸಭಕ್ಷಣಂ' ಎಂದುದಾಗಿ, ಇಂತೀ ವಿಚಾರದಲ್ಲಿ ಸುಳಿವ ಸುಳುಹೆ ವಿಚಾರಕರ್ಪರ. ವೇದಾತೀತಾಗಮಾತೀತಃ ಶಾಸ್ತ್ರಾತೀತೋ ನಿರಾಶ್ರಯಃ ಆನಂದಾಮೃತಸಂತುಷ್ಟೋ ನಿರ್ಮಮೋ ಜಂಗಮಃ ಸ್ಮೃತಃ ಇಂತೆಂದುದಾಗಿ, ಕಾಯಗುಣವಳಿದು, ಪರಕಾಯಗುಣವುಳಿದು, ಇಂದ್ರಿಯಗುಣವಳಿದು, ಅತೀಂದ್ರಿಯತ್ವದಲ್ಲಿ ವಿಶ್ರಾಂತಿಯನೈದಿ, ರಣಗುಣವಳಿದು, ನಿರಾವರಣ ನಿರ್ಮಲ ನಿರ್ವಿಕಾರ ನಿಜಲಿಂಗದಲ್ಲಿ ನಿಶ್ಚಲಿತನಾಗಿ, ಜೀವನ ಗುಣವಳಿದು, ಪರಮಾತ್ಮಲಿಂಗದಲ್ಲಿ ಘನಚೈತನ್ಯ ತಲ್ಲೀಯವಾಗಿ, ತನಗಿದಿರಿಟ್ಟು ತೋರುವ ತೋರಿಕೆಯೆಲ್ಲವೂ ತಾನಲ್ಲದೇನು ಇಲ್ಲವೆಂದರಿದು, ಕಾಬವೆಲ್ಲವೂ ಶಿವರೂಪು, ಕೇಳುವವೆಲ್ಲವೂ ಶಿವಾನುಭಾವ, ನಡೆದುದೆಲ್ಲವೂ ಶಿವಮಾರ್ಗ, ನುಡಿದುದೆಲ್ಲವೂ ಶಿವತತ್ವ, ಕೊಡುವ ಕೊಂಬೆಡೆಯಲ್ಲಿ ಎಡೆದೆರಪಿಲ್ಲದೆ ಅಖಂಡಾದ್ವಯ ಪರಿಪೂರ್ಣಚಿದಾನಂದರೂಪ ತಾನೆಂದರಿದು, ನಿಂದ ನಿಲವೆ ಅವಿಚಾರಕರ್ಪರ. ಅದೆಂತೆಂದಡೆ: 'ಚರಾಚರವಿಹೀನಂ ಚ ಸೀಮಾಸೀಮಾವಿವರ್ಜಿತಂ ಸಾಕ್ಷಾನ್ ಮುಕ್ತಿಪದಂ ಪ್ರಾಹುರುತ್ತಮಂ ಜಂಗಮಸ್ಥಲಂ' ಎಂದುದಾಗಿ, ಶಬ್ದ ಚಲನೆಯಿಲ್ಲದುದೆ ಲಿಂಗವೆಂದರಿದು, ಬಿಂದುಚಲನೆಯಿಲ್ಲದುದೆ ಜಂಗಮವೆಂದರಿದು, ಆ ಬಿಂದುವನೆ ಲಿಂಗಮುಖದಲ್ಲಿ ನಿಲಿಸಿ ಆ ನಾದವನೆ ಘನಚೈತನ್ಯಜಂಗಮಮುಖದಲ್ಲಿ ನಿಲಿಸಿ, ಆ ನಾದಬಿಂದುವನೊಂದು ಮಾಡಿ ನಿಂದ ನಿಲವೆ ಉಪಮಾತೀತವದೆಂತೆಂದಡೆ: ನಾದನಿಶ್ಚಲತೋ ಲಿಂಗಂ ಬಿಂದುನಿಶ್ಚಲತೋ ಚರಃ ನಾದಬಿಂದು ಸಮಾಯುಕ್ತ ಶ್ರೇಷ್ಠಂ ತಲ್ಲಿಂಗಜಂಗಮಂ ಎಂದುದಾಗಿ, ಮನಶ್ಚಂದಿರ ಇತ್ಯುಕ್ತಂ ಚಕ್ಷುರಾದಿತ್ಯ ಉಚ್ಯತೇ ಚಂದಿರಾದಿತ್ಯಸಂಯುಕ್ತಂ ಉತ್ತಮಂ ಜಂಗಮಸ್ಥಲಂ ಎಂದುದಾಗಿ, ಮನಸ್ಥಂ ಮನೋ ಮಧ್ಯಸ್ಥಂ ಮನೋ ಮಧ್ಯಸ್ಥ ವರ್ಜಿತಾಃ ಮನಸಾ ಮನ ಆಲೋಕ್ಯ ಸ್ವಯಂ ಸಿದ್ಧಾ ಸುಯೋಗಿನಃ ಇಂತೆಂದುದಾಗಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ, ನಿಮ್ಮ ಶರಣರಜಾತಜನಿತರು, ಅನುಪಮಚರಿತರು.