Index   ವಚನ - 70    Search  
 
ಎನ್ನ ಸದ್ಗುರುವು ಮಾಡುವ ಗುರುತ್ವ ಉಪಮಾತೀತವಯ್ಯ ಅದೆಂತೆಂದಡೆ:ಎನ್ನ ನೇತ್ರದಲ್ಲಿ ತನ್ನ ರೂಪ ತುಂಬಿ, ಎನ್ನ ನೇತ್ರವನು ಗುರುವು ಮಾಡಿದ. ಎನ್ನ ಶ್ರೋತ್ರದಲ್ಲಿ ಮಹಾಮಂತ್ರವ ತುಂಬಿ, ಎನ್ನ ಶ್ರೋತ್ರವನು ಗುರುವು ಮಾಡಿದ. ಎನ್ನ ಘ್ರಾಣದಲ್ಲಿ ಗುರುಪಾದಪದ್ಮದಲ್ಲಿಹ ಮಹಾಗಂಧವ ತುಂಬಿ ಎನ್ನ ಘ್ರಾಣವನು ಗುರುವು ಮಾಡಿದ. ಎನ್ನ ಜಿಹ್ವೆಯಲ್ಲಿ ತನ್ನ ಕರುಣಪ್ರಸಾದವ ತುಂಬಿ, ಎನ್ನ ಜಿಹ್ವೆಯನು ಗುರುವು ಮಾಡಿದ. ಎನ್ನ ಕಾಯವನು ಭಕ್ತಕಾಯ ಮಮಕಾಯವೆಂದು ಪ್ರಸಾದಕಾಯವೆಂದೆನಿಸಿ, ಎನ್ನ ಕಾಯವನು ಗುರುವು ಮಾಡಿದ. ಎನ್ನ ಪ್ರಾಣದಲ್ಲಿ ಲಿಂಗಪ್ರಾಣಸಂಬಂಧವ ಮಾಡಿ ಎನ್ನ ಪ್ರಾಣವನು ಗುರುವು ಮಾಡಿದ. ಇಂತು ಎನ್ನ ಅಂತರಂಗ ಬಹಿರಂಗವನು ಗುರುವು ಮಾಡಿ, ಸರ್ವಾಂಗವನೂ ಗುಪ್ತವ ಮಾಡಿದ ಮಹಾಶ್ರೀಗುರುವಿಂಗೆ ನಾನಿನ್ನೇನ ಮಾಡುವೆನಯ್ಯ, ಮಾಡುವೆನಯ್ಯ ಗುರು ಪೂಜೆಯನು ಆವಾವ ದ್ರವ್ಯಂಗಳನು ಆವಾವ ಪದಾರ್ಥಂಗಳನು, ಆವಾವ ಪುಷ್ಪಫಲಾದಿಗಳನು ವಿಚಾರಿಸಿ ನೋಡಿದಡೆ ಅವಾವಕ್ಕು ಗುರುತ್ವವಿಲ್ಲ ಸರ್ವದ್ರವ್ಯ ಮೂಲ ಮನ ಸರ್ವಪದಾರ್ಥಮೂಲ ಮನ ಸರ್ವರಸ ಪುಷ್ಪಫಲಾದಿಗಳೆಲ್ಲವಕ್ಕೆಯು ಮೂಲಿಗ ಮನವು ಇದು ಕಾರಣ ಸರ್ವಗುರುತ್ವವನುಳ್ಳ ಎನ್ನ ಮನೋವಾಕ್ಕಾಯ ಸಹಿತವಾಗಿ ಗುರುವಿಂಗಿತ್ತು ಎನ್ನ ಶಿರವನು ಶ್ರೀಗುರುವಿನ ದರ್ಶನ ಸ್ಪರ್ಶನವ ಮಾಡಿ ಸುಖಿಯಾಗಿಪ್ಪೆನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.