Index   ವಚನ - 75    Search  
 
`ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ' ಎಂಬ ಶ್ರುತಿಮತವಿಡಿದು ಏಕಲಿಂಗನಿಷ್ಠಾಪರನಾದನು ಮಾಹೇಶ್ವರನು. `ಶಿವ ಏಕೋ ಧ್ಯೇಯಃ ಶಿವಂಕರಃ ಸರ್ವಮನ್ಯತ್ಪರಿತ್ಯಾಜ್ಯಂ' ಎಂಬ ಶ್ರುತಿ ಮತವಿಡಿದು ಅನ್ಯದೈವಂಗಳಂ ಬಿಟ್ಟು ನಿಮ್ಮನೇ ಧ್ಯಾನಿಸುವನಯ್ಯಾ, ನಿರಂತರ ನಿಮ್ಮ ಮಾಹೇಶ್ವರನು. `ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್' ಎಂಬ ಶ್ರುತಿಮತವಿಡಿದು ನಿಮ್ಮನೆ ಉಪಾಸ್ತಿಯ ಮಾಡಿ ಲಿಂಗಾರ್ಚನೆಯ ಮಾಡುವರಯ್ಯಾ ನಿಮ್ಮ ಮಾಹೇಶ್ವರರು. ಅದು ಕಾರಣ ನಿಮ್ಮ ಐಕ್ಯವ ನಿಮ್ಮ ಮಾಹೇಶ್ವರನೆ ಬಲ್ಲ. ನಿಮ್ಮ ಮಾಹೇಶ್ವರಾಧಿಕ್ಯವ ನೀವೇ ಬಲ್ಲಿರಿ. ಉಳಿದ ದೇವ ದಾನವ ಮಾನವಾದಿಗಳು ಅರಿಯಬಹುದೆ? ನಿಮ್ಮ ಘನವನು, ನಿಮ್ಮ ಮಾಹೇಶ್ವರರ ಘನವನು ಶಿವನೆ ಬಲ್ಲ, ಶಿವನ ಮೀರುವ ಪದವುಂಟೆ? ಸಕಲಬ್ರಹ್ಮಾಂಡವನೂ ಅವಗ್ರಹಿಸಿಕೊಂಡಿಪ್ಪನಾಗಿ ಶಿವನು, ಆ ಶಿವನನವಗ್ರಹಿಸಿಕೊಂಡಿಪ್ಪರು ಮಾಹೇಶ್ವರರು ಅಣುಮಹತ್ತಿನೊಳಗೆ ಸಂಪೂರ್ಣರಪ್ಪರು. 'ಅಣೋರಣೀಯಾನ್ಮಹತೋ ಮಹೀಯಾನ್' ಎಂದುದಾಗಿ, `ಯಥಾ ಶಿವಸ್ತಥಾ ಭಕ್ತಃ' ಎಂದುದಾಗಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯ್ಯನ ಶರಣರ ಮೀರಿದ ಪದ ಉಂಟಾದರೆ ಬಲ್ಲರೆ ಹೇಳಿ.