Index   ವಚನ - 93    Search  
 
ಕಾಮಧೇನು ಕಲ್ಪತರು ಚಿಂತಾಮಣಿ ಪರುಷ ಮೊದಲಾದ ಮಹಾವಸ್ತುಗಳ ಮುಂದಿಟ್ಟುಕೊಂಡು ಕಾಮಿಸುವ ಮನಸಿನೊಳಗಿರುತ ಇದಾನೆ ಕಾಣಾ, ಈ ಕೊಡುವ ಗುಣವುಳ್ಳ ಮಹಾಶಿವನು. ಹಿರಣ್ಯಪತಿ ಹಿರಣ್ಯಬಾಹು ವರದಹಸ್ತನು ಅಭಯಹಸ್ತನು ಮಹಾದೇವನಿದಾನೆ. ಒಲಿಯಲರಿಯಿರಿ ಒಲಿಸಲರಿಯಿರಿ ಬೇಡಲರಿಯಿರಿ ಕೊಡಲರಿಯಿರಿ, ಕೊಂಡು ಪ್ರಯೋಗಿಸಲರಿಯಿರಿ. ನೀವು ಕೊಳಲರಿಯಿರಲ್ಲದೆ, ಶಿವನೇನೂ ಕೊಡಲರಿಯನೆ? ಅಂಗಭೋಗಕ್ಕೆಂದಡೆ ಕೊಡನು, ಲಿಂಗಭೋಗಕ್ಕೆಂದಡೆ ಕೊಡುವನು. ಇದು ಸತ್ಯ ಶಿವನಾಣೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.