ಕಾಮವುಳ್ಳಲ್ಲಿ ಭಕ್ತಿ ಇಲ್ಲ, ಕ್ರೋಧವುಳ್ಳಲ್ಲಿ ಭಕ್ತಿ ಇಲ್ಲ.
ಲೋಭವುಳ್ಳಲ್ಲಿ ಭಕ್ತಿ ಇಲ್ಲ, ಮೋಹವುಳ್ಳಲ್ಲಿ ಭಕ್ತಿ ಇಲ್ಲ.
ಮದವುಳ್ಳಲ್ಲಿ ಭಕ್ತಿ ಇಲ್ಲ, ಮತ್ಸರವುಳ್ಳಲ್ಲಿ ಭಕ್ತಿ ಇಲ್ಲವಯ್ಯಾ.
ಮಹಾ ಅರಿಷಡ್ವರ್ಗವುಳ್ಳಲ್ಲಿ ಭಕ್ತಿ ಇಲ್ಲ.
ಇವು ಉಂಟಾಗಿ ಭಕ್ತರೆಂಬರು ,ಅದೇಕಯ್ಯಾ?
ಹಗೆಯ ಸಮೂಹವಿದ್ದಲ್ಲಿ ಕೇಳಿರೆ, ಒಬ್ಬನೆಂತಿಪ್ಪನಯ್ಯಾ?
ಇದು ಕಾರಣ,
ಅರಿಷಡ್ವರ್ಗವುಳ್ಳಲ್ಲಿ ಭಕ್ತಿ ಇಲ್ಲ, ಭಕ್ತಿವುಳ್ಳಲ್ಲಿ ಅರಿಷಡ್ವರ್ಗಗಳಿಲ್ಲ.
ಈ ಅರಿಷಡ್ವರ್ಗವಿಲ್ಲದವನೇ ಭಕ್ತ, ಇಂತಹ ಭಕ್ತದೇಹಿಕ ದೇವನು
ಉರಿಲಿಂಗಪೆದ್ದಿಪ್ರಿಯವಿಶ್ವೇಶ್ವರಾ.