ಕೊಡುವ ಲಿಂಗವನು ಬೇಡಿಕೊಳಲರಿಯದೆ
ಕೊಡದ ಮಾನವರನಾಸೆಗೈದ
ಲಿಂಗವಂತನನೇನೆನಬಹುದು?
ಕೊಟ್ಟನು ನೋಡಿರೆ ಲಿಂಗವು,
ಮಾರ್ಕಂಡೇಯಂಗೆ ಮಳೆಯರಾಜಂಗೆ ಆಯುಷ್ಯವ.
ಕೊಟ್ಟನು ನೋಡಿರೆ ಲಿಂಗವು,
ಲಿಂಗವಂತರು ಕುಡ ಹೇಳಿದವರಿಗೆ ಆಯಷ್ಯವ.
ಮುಸುಟೆಯ ಚೌಡಿರಾಯ,
ಮಡಿವಾಳ ಮಾಚಿದೇವರು
ಬಸವರಾಜದೇವರು ಹೇಳಿದವರಿಗೆ
ಆಯುಷ್ಯವ ಕೊಟ್ಟನು ನೋಡಿರೆ,
ಚೋಳಂಗೆ ಹೊನ್ನಮಳೆಯನೂ,
ದಾಸಂಗೆ ತವನಿಧಿಯನೂ
ದೇವದಾನವ ಮಾನವರಿಗೆ ಇಚ್ಛೆಯನರಿದು.
ಬೇಡಿದವರಿಗೆ ಬೇಡಿದ ಪದವ ಕೊಟ್ಟ
ಆಯುಷ್ಯ ಭಾಷೆಯ ಫಲವ ನೋಡಯ್ಯಾ:
ಲಿಂಗವೂ ಸಾಧ್ಯವಾಯಿತ್ತು,
ಗುರುಲಿಂಗವೆಂದರಿದು ಲಿಂಗಾರ್ಚನೆಯ
ಮಾಡಿದ ಫಲವ ನೋಡಯ್ಯಾ.
ಜಂಗಮ ಸಾಧ್ಯವಾಯಿತ್ತು,
ಲಿಂಗ ಜಂಗಮವೆಂದರಿದು
ಜಂಗಮಾರ್ಚನೆಯ ಮಾಡಿದ
ಫಲವ ನೋಡಯ್ಯಾ.
ಪ್ರಸಾದ ಸಾಧ್ಯವಾಯಿತ್ತು,
ಪ್ರಸಾದ ಪ್ರಜ್ಞಾನಪರ ಕೇವಲ ಮುಕ್ತಿಯೆಂದು
ಗ್ರಹಿಸಿದ ಫಲವ ನೋಡಯ್ಯಾ.
ಶ್ರೀಗುರು ಲಿಂಗ ಜಂಗಮ ಒಂದೇ ಎಂದು,
ಪ್ರಸಾದ ಒಂದೇ ಎಂದು ಅರಿದೆನು.
ಇದೇ ಜ್ಞಾನ, ಇದೇ ಮುಕ್ತಿ, ಇದೇ ಪದ, ಇದೇ ಮಹಾಫಲ.
ಇನ್ನು ಮೇಲೆ ಈ ಪದಕ್ಕೆ ಪದ ಉಂಟೇ?
ಈ ಫಲಕ್ಕೆ ಫಲ ಉಂಟೇ? ಇಲ್ಲ. ನಿಮ್ಮಾಣೆ
ಇದೇ ಮಹತ್ಪರಿಣಾಮವಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.