Index   ವಚನ - 102    Search  
 
ಗುರುಕಾರುಣ್ಯವ ಪಡೆದು ಲಿಂಗವೇ ಪ್ರಾಣವಾಗಿ ಶ್ರೀಗುರು ಲಿಂಗ ಪ್ರಾಣ ಒಂದಾಗಿ, ಕರಸ್ಥಲದಲ್ಲಿ ಶ್ರೀಗುರು ಲಿಂಗವನು ಬಿಜಯಂಗೈಸಿ ಕೊಟ್ಟ ಬಳಿಕ ಲಿಂಗದ ಅಂಗ, ಲಿಂಗದ ನೇತ್ರ, ಲಿಂಗದ ಶ್ರೋತ್ರ ಲಿಂದ ಘ್ರಾಣ, ಲಿಂಗದ ಜಿಹ್ವೆ, ಲಿಂಗದ ಹಸ್ತ ಲಿಂಗದ ಪಾದ, ಲಿಂಗದ ಶಿರ, ಲಿಂಗದ ಮನ ಲಿಂಗದ ಬುದ್ಧಿ, ಲಿಂಗದ ಚಿತ್ತ, ಲಿಂಗದ ಅಹಂಕಾರ. ಅಂಗತತ್ತ್ವವೆಲ್ಲ ಲಿಂಗತತ್ತ್ವ, ಅಂಗಕ್ರೀಯೆಲ್ಲ ಲಿಂಗಕ್ರೀ. ಇದು ಕಾರಣ, ಸೋಹಂಕ್ರೀ ಸೋಹಂಭಾವ ಶ್ರೀಗುರು ಮಾಡಿದ ಕ್ರೀ ಉಪಮಾತೀತ. ವೇದಶಾಸ್ತ್ರ ಪುರಾಣಾಗಮಂಗಳ ಕ್ರೀಯಲ್ಲ, ವಿಷ್ಣ್ವಾದಿಗಳ ಹವಣಲ್ಲ, ಲೋಕಾದಿ ಲೋಕಂಗಳ ಪರಿಯಲ್ಲ. ಇವೆಲ್ಲವ ಮೀರಿದ ವಿಪರೀತ ಮಹಾಘನ ಕ್ರೀಯ ಶ್ರೀಗುರು ತಾನೆ ಬಲ್ಲನಯ್ಯಾ ಉರಿಲಿಂಗಪೆದ್ದಿಪ್ರಿಯವಿಶ್ವೇಶ್ವರಾ.