ಗುರುವೆ ಪರಶಿವನು
ಪರಶಿವನೇ ಶರಣಭರಿತನಾಗಿ ಎಮ್ಮ ಶರಣರೇ ಗುರು.
ಒಂದು ದೀಕ್ಷೆಯಲ್ಲಿ ಗುರುವೆಂದಡೆ,
ನಿಮಗೆಲ್ಲಕೆ ಕರ್ತನಹ ವಿಷ್ಣು ಎಮ್ಮ ಶರಣ
ಉಪಮನ್ಯುವಿನ ಕೈಯಲ್ಲಿ
ದೀಕ್ಷೆಯ ಪಡೆದು ಶಿಷ್ಯನಾದನು,
ಅಂತಾಗೆ ಎಮ್ಮ ಶರಣರೆ ಗುರು.
'ಲಿಂಗಿನಾ ಸಹ ವರ್ತಿತ್ವಂ ಲಿಂಗಿನಾ ಸಹ ವಾದಿತಾ|
ಲಿಂಗಿನಾ ಸಹ ಚಿಂತಾ ಚ ಲಿಂಗಯೋಗೋ ನ ಸಂಶಯಃ'||
ಲಿಂಗಾಂಗಿನಾ ಚ ಸಂಗಶ್ಶ ಲಿಂಗಿನಾ ಸಹವಾಸಿತಾ|
ಲಿಂಗೇನ ಸಹ ಭುಕ್ತಿಶ್ಯ ಲಿಂಗಯೋಗೋ ನ ಸಂಶಯಃ||
ಒಂದು ದೀಕ್ಷೆಯಲ್ಲಿ ಗುರುವೆ ನೀವು?
ನಿಮಗೆ ಕರ್ತರಹ ವಿಷ್ಣು ಬ್ರಹ್ಮ ಮೊದಲಾದವರನು
ನಮ್ಮ ಶರಣರೆ ಶಿಕ್ಷಿಸಿಕೊಳ್ಳುತಿಹರಾಗಿ
ನಮ್ಮ ಶರಣರೇ ಗುರು ಕಾಣಿರೋ ಸ್ವಾನುಭಾವದಲ್ಲಿ.
ಗುರುವೆ ದೇವ ದಾನವ ಮಾನವರೆಲ್ಲರೂ?
ಪರಸ್ತ್ರೀಯರಿಗೆ ಅಳಪುವುದು ಹಿರಿದು ಗುರುತ್ವವೇ? ಅಲ್ಲ.
ಪರಧನ ಅನ್ಯದೈವ ಉಭಯವಿಜ್ಞಾನ ಅಜ್ಞಾನ,
ದ್ವಂದ್ವಕ್ರಿಯಾ ವರ್ತಿಸುತ್ತಿಹರಾಗಿ.
ಅದು ಕಾರಣ, ಸರ್ವರೂ ಲಘುವಾದರು
ಅನುಭಾವಸಿದ್ಧಿಯಾದ ನಿಮ್ಮ ಶರಣರೇ ಗುರು.
ಶಿವತನು ಲಿಂಗಪ್ರಾಣವಾದ ಬಳಿಕ
ಉತ್ಪತ್ತಿಸ್ಥಿತಿಲಯವೆಂದು ಧ್ಯಾನಿಸುವೆ ಚಿಂತಿಸುವೆ ಅಂಜುವೆ ಮನವೇ
ನೀನೊಂದು ಕ್ರಿಯಾಕರ್ಮ ಉಪಾಧಿಯಿಂದ.
ಈ ತ್ರಿವಿಧಕ್ಕೆ ತತ್ಕ್ರಿಯಾಕರ್ಮ ಉಪಾಧಿಯಿಂದ
ಈ ತ್ರಿವಿಧಕ್ಕೆ ತತ್ಕ್ರಿಯಾಕರ್ಮವ ಮಾಡಿ
ಸಂಸಾರವ ಗೆಲಿವೆನೆಂಬೆ ಮನವೆ, ಇದು ಜ್ಞಾನವಲ್ಲ.
ನಿರುಪಾಧಿಕನಾಗಿ ಮಹಾಲಿಂಗ ಕರುಣಿ
ಶ್ರೀಗುರುವಾದ ಲಿಂಗವಾದ ಜಂಗಮವಾದ ಪ್ರಸಾದವಾದ
ಲಿಂಗತನುವಾದ ಲಿಂಗಪ್ರಾಣವಾದ ಲಿಂಗಕ್ರೀಯಾದ.
ಸರ್ವಕ್ರಿಯಾ ಕರ್ಮಂಗಳು ಲಿಂಗಕ್ರಿಯಾಕರ್ಮ,
ಉತ್ಪತ್ತಿಸ್ಥಿತಿಲಯವೆಂಬುದಿಲ್ಲ ಸರ್ವವೂ ಲಿಂಗಸ್ಥಿತಿ,
ದುಶ್ಚಿಂತೆಯ ಬಿಡು ನಿರುಪಾಧಿಕನಾಗು.
ಗುರುಕರುಣಿಸಿದ ಲಿಂಗಕ್ಕೆ ನೀನು ಉಪಾಧಿಕ ಕ್ರೀಯ ಮಾಡದೆ
ಸುಚಿತ್ತದಿಂದ ಮಹಾಲಿಂಗವನು ಧ್ಯಾನಿಸಿ ಪೂಜಿಸಿ ಚಿಂತಿಸಿ
ಅಲ್ಲಿಯೇ ಸುಖಿಯಾಗು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ರಕ್ಷಿಸುವನು.