Index   ವಚನ - 121    Search  
 
ಜಲಕುಂಭಚಂದ್ರವತ್ತೆಂಬ ಯಥಾ ನ್ಯಾಯವನರುಹಿಸಿ ಕುಂಭ ಹಲವಾದಡೆ ಚಂದ್ರನೊಬ್ಬನೊ? ಇಬ್ಬರೊ? ಬಲ್ಲರೆ, ನೀವು ಹೇಳಿರೆ. ಆ ಭೂಮಿಯಲ್ಲಿ ಅಡಿಗೊಂದೊಂದು ಸ್ಥಲವಾಗಿ ಸ್ಥಲಕ್ಕೊಂದು ಬಣ್ಣವಪ್ಪ ಮೃತ್ತಿಕೆಯ ತಂದು ಘಟವಂ ಮಾಡಿ ಆ ಘಟವ, ಬಹುವಿಧಮಂ ಕೂಡಿ ದಗ್ಧವ ಮಾಡಿ ಏಕಶಾಯಿಯಂ ಮಾಡೆ, ಉಪಯೋಗಕ್ಕೆ ಸಂದುದೊ ಘಟವು? ಇಂತೀ ಪರಿಯಲ್ಲಿ ತಿಳಿದು ಕೇಳಿರೆ. ಇಂತು ಗುರುಕಾರುಣ್ಯವುಳ್ಳ ದೇಹಕ್ಕೆ ವರ್ಣಾಶ್ರಮವನತಿಗಳೆಯದಿದ್ದಡೆ ಆ ಗುರುಕಾರುಣ್ಯ ತಾನೆಂತಿಪ್ಪುದು ಹೇಳಿರೆ? ಆ ಗುರುಸ್ವಾಮಿ ಹಸ್ತಮಸ್ತಕಸಂಯೋಗವ ಮಾಡಿ, ಮಾಂಸಪಿಂಡವ ಕಳೆದು ಮಂತ್ರಪಿಂಡವಂ ಮಾಡಿ, ವಾಯುಪ್ರಾಣಿಯ ಕಳೆದು ಲಿಂಗಪ್ರಾಣಿಯ ಮಾಡಿದ. ಶಿವಜನ್ಮಕುಲಯುತರಾಗಿ ಶಿವನ ಶರಣರು ವಾಙ್ಮಾನಸಾಗೋಚರರೆನ್ನದಿದ್ದಡೆ ಕುಂಭೀಪಾತಕನಾಯಕನರಕ ತಪ್ಪದು, ಸತ್ಯಸತ್ಯ ಅವರಿಗಿದೇ ಗತಿ. ಇನ್ನು ಅನಂತಕೋಟಿಬ್ರಹ್ಮಕಲ್ಪ ಉಳ್ಳನ್ನಕ್ಕರ ಇಹರು ಕಾಣಾ ನರಕದಲ್ಲಿ, ಇದಕಿನ್ನು ಶ್ರುತಿ: 'ಪಾತಕಂತು ಮನುಷ್ಯಾಣಾಂ ತನುಭಾವೇಷು ವರ್ಧನಂ ಜನ್ಮಕರ್ಮಾಮರಣಾಂತಂ ಅಜಕಲ್ಪಾವಧಿಂ ಭವೇತ್' ಮುಕ್ತಿ ಎಂಬುದು ಉಂಟಾದುದಕ್ಕೆ ಉಪದೃಷ್ಟವ ಹೇಳಿಹೆನು: ಹಿಂದೆ ಅರಿಯಿರೆ, ನಿಮ್ಮ ಋಷಿ ಮೂಲಾಂಕುರವನು, ಉಪದೇಶಗಮ್ಯರಾಗಿ ಅಷ್ಟಾದಶಕುಲಂಗಳನೂ ಏಕವರ್ಣವ ಮಾಡಿರೆ ಉಪದೇಶಗಮ್ಯದಿಂದಲೂ ಇನ್ನರಿದು ಹಡೆದ ಪದಫಲಾದಿಗಳ ನೋಡಿರೆ. ಜನ್ಮಕರ್ಮನಿವೃತ್ತಿಯಾಗದೆ ಒಬ್ಬ ಋಷಿಗೆ? ಜೀವನದ ಮೊದಲಲ್ಲಿ ಆವ ಬೇಡ ಕಾಣಾ. ಜ್ಞಾನದಿಂದ ಅಂತಂತು ಮಾಡಿದಡೆ, ಶಿವಭಕ್ತನಿಂದೆಯಿಂದ ಒಂದು ಬ್ರಹ್ಮಕಲ್ಪಪರಿಯಂತರ ಕುಂಭೀಪಾತಕನಾಯಕನರಕದಲ್ಲಿ ಅಯಿದಾನೆ ಎಂದುದು ಶ್ರುತಿ: 'ಲಿಂಗಸ್ಯಾರಾಧನೇ ವಿಘ್ನಂ ಯತ್ಕೃತಂ ಸ್ವಾರ್ಥಕಾರಣಾತ್ ನಿಮೇಷಮಪಿ ತತ್ಪಾಪಂ ಕರೋತಿ ಚ ಕುಲಕ್ಷಯಂ' ಸೂಕರಃ ಕೋಟಿಜನ್ಮಾನಿ ಲಭತೇ ಶತಕೋಟಿಭಿಃ ಮೃಗಶ್ಚ ಕೋಟಿಜನ್ಮಾನಿ ಶೃಗಾಲಃ ಕೋಟಿಜನ್ಮಭಿಃ ಅಂಧಶ್ಚ ಲಕ್ಷಜನ್ಮಾನಿ ಕುಬ್ಜಸ್ಸ್ಯಾದಬ್ಜಜನ್ಮಭಿಃ ಪಂಗುಲಃ ಕೋಟಿಜನ್ಮಾನಿ ಶಿಖಂಡೀ ಜಾಯತೇ ತಥಾ ಉಲೂಕೋ ವಾಯಸೋ ಗೃಧ್ರಶ್ಸೂಕರೋ ಜಂಬುಕಸ್ತಥಾ ಮಾರ್ಜಾಲೋ ವಾನರಶ್ಚೈವ ಯುಗಕೋಟಿ ಶತ ನರಃ ಲಿಂಗಾರ್ಚನರತಂ ವಾಚಾ ಸಕೃಲ್ಲಿಂಗಂ ಚ ದೂಷಯನ್ ಯುಗಕೋಟಿಕ್ರಿಮಿರ್ಭೂತ್ವಾ ವಿಷ್ಟಾಯಾಂ ಜಾಯತೇ ಪುನಃ ಕೀಟಃ ಪತಂಗೋ ಜಾಯೇತ ಕೃತವೃಶ್ಚಿಕದರ್ದುರಃ ಜಾಯಂತೇ ಚ ಮ್ರಿಯಂತೇ ಚ ನರಾಸ್ತೇ ನಾಸ್ತಿ ವೈ ಸುಖಂ ಇಂತೆಂದುದಾಗಿ- ಅಂದೊಮ್ಮೆ ಬಂದುದು ದೂರ್ವಾಸನೆಂಬ ಋಷಿಗೆ ಮರ್ತ್ಯಲೋಕದಲ್ಲಿ ಮಹಾಪವಾದ. ಅದ ಮರಳಿ ಪರಿಹರಿಸಿಕೊಳನೆ ಮತ್ರ್ಯಲೋಕದಲ್ಲಿ ಶಿವಾರ್ಚನೆಯಂ ಮಾಡಿ? ಶಿವಭಕ್ತರಿಗೆ ಮನೋಹರವಂತಹ ಪೂಜೆಯ ಮಾಡಿ ಆ ಪರಶಿವನ ಘನಲಿಂಗವೆಂದರಿದು ಅರ್ಚಿಸಿ, ಪರಮಭಕ್ತರ ಪಾದತೀರ್ಥಪ್ರಸಾದದಿಂದ ಆ ಋಷಿ ಅಮರಕಾಯನೆಂಬ ನಾಮವ ಪಡೆಯನೆ? ಆಕಾರಾಧ್ಯಕ್ಷರಂಗಳಿಗೆ ನಾಯಕವಂತಹ ಅಕ್ಷರ ಪಂಚಾಕ್ಷರವೆಂಬುದನರಿದು ಶಿವನೇ ಸರ್ವದೇವರಿಗೆ ಅಧಿದೈವವೆಂದರಿದು 'ವೇದಶಾಸ್ತ್ರಪುರಾಣಾನಿ ಸ್ಪಷ್ಟಾ ವೇಶ್ಯಾಂಗನಾ ಇವ ಯಾ ಪುನಶ್ಯಾಂಕರೀ ವಿದ್ಯಾ ಗುಪ್ತಾ ಕುಲವಧೂರಿವ' ಎಂದುದಾಗಿ: 'ಶಿವಾರ್ಚಕಪದದ್ವಂದ್ವಸ್ಯಾರ್ಚನಾತ್ ಸ್ಮರಣಾದಪಿ ಕೋಟಿಜನ್ಮಸು ಸೌಖ್ಯಂ ಸ್ಯಾತ್ ಸ ರುದ್ರೋ ನಾತ್ರ ಸಂಶಯಃ' ಎಂಬರ್ಥವನರಿದು ಆಂಗಿರಸ, ಶಾಂಡಿಲ್ಯ, ವೇದವ್ಯಾಸ, ವಾಲ್ಮೀಕಿ, ಮಾಂಡವ್ಯ ಮೊದಲಾದ ಋಷಿಗಳೆಲ್ಲರೂ ಶಿವನಿಂದೆ, ಶಿವಭಕ್ತರ ನಿಂದೆಯ ಮಾಡಿ ಶಿವನ ಕ್ಷೇತ್ರವಹ ವೇದಾದಿಶಾಸ್ತ್ರಗಮಂಗಳಿಗೆ ಪ್ರತಿಯಿಟ್ಟು ಕರ್ಮಶಾಸ್ತ್ರಂಗಳನೆಸಗಿ ಅಕ್ಷಯನರಕವನೈದಿರಲಾಗಿ, ತ್ರ್ಯಕ್ಷನ ಶರಣ ಕೃಪಾವರದಾನಿ ಏಕನಿಷ್ಠ ಪರಮಮಾಹೇಶ್ವರ ಸಾನಂದನು ಕರುಣದಿಂದಲೆತ್ತನೆ ಅವರೆಲ್ಲರ ನರಕಲೋಕದಿಂದ? ಇಂತಿವಕ್ಕೆ ಸಾಕ್ಷಿದೃಷ್ಟಾಂತಗ್ರಂಥಗಳ ಪೇಳುವಡೆ, ಅಂತಹವು ಅನಂತ ಉಂಟು, ಆಗಮ ಪುರಾಣದಲ್ಲಿ ಅರಿವುಳ್ಳವರು ತಿಳಿದು ನೋಡುವುದು. ಶಾಪಹತರೆನಿಸುವ ಪಾಪಿಗಳು ಅವ ಮುಚ್ಚಿ ವಿತಥವ ನುಡಿವರು. ಇದನರಿದು ನಿತ್ಯಸಹಜ ಶಿವಲಿಂಗರ್ಚನೆಯಂ ಮಾಡಿ `ತತ್ವಮಸಿ' ವಾಕ್ಯಂಗಳನರಿದು 'ತತ್ಪದೇನೋಚ್ಯತೇ ಲಿಂಗಂ ತ್ವಂಪದೇನಾಂಗಮುಚ್ಯತೇ ಲಿಂಗಾಂಗಸಂಗೋ[s]ಸಿಪದಂ ಪರಮಾರ್ಥನಿರೂಪಣೇ' ಎಂಬುದನರಿದು ನಿತ್ಯನಿರ್ಮಳಜ್ಞಾನಾನಂದ ಪ್ರಕಾಶವೆಂಬ ಮಹಾಮನೆಯಲ್ಲಿ ಪರಮಸುಖದಲ್ಲಿ ಆಕಾರಂಗಳ ಲಯವನು ತಮ್ಮಲ್ಲಿ ಎಯ್ದಿಸಿ ನಿತ್ಯನಿರ್ಮಲಶಿವನ ಪ್ರಸನ್ನಪ್ರಸಾದವನೈದಿದ ಮಹಾನುಭಾವರನೆನಗೆ ತೋರಯ್ಯಾ. ನಾ ನಿನ್ನನರಿದುದಕ್ಕೆ ಫಲವಿದು ನೀನೆನ್ನ ನೋಡಿದುದಕ್ಕೆ ಫಲವಿದು. ಸುಖಸಚ್ಚಿದಾನಂದಸ್ವರೂಪ ಅನಿತ್ಯವ ಮೀರಿದ ನಿತ್ಯ ನೀನಲ್ಲದೆ ಮತ್ತೊಂದುಂಟೆ? ಎನಗೆ ನಿನ್ನಂತೆ ನಿರ್ಮಲಜ್ಞಾನಾನಂದಪದವನಿತ್ತು ಎನ್ನ ನಿನ್ನಂತೆ ಮಾಡಿ ಉದ್ಧರಿಸಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ..