Index   ವಚನ - 137    Search  
 
'ತಾನು ಸಾವ ಕನಸ ಕಂಡಡೆ ಎದ್ದು ಕುಳ್ಳಿರಿ' ಎಂಬ ಲೋಕದ ನಾಣ್ನುಡಿ ದಿಟ ಲೇಸು. ಸಾಯಬಹುದೆ ಸತಿಯ ಬಿಟ್ಟು, ಸುತರ ಬಿಟ್ಟು, ಸಕಲಭೋಗಾಕ್ರೀಗಳಂ ಬಿಟ್ಟು? ಇನ್ನು ದಿಟ ದಿಟ ಕೃತಯುಗ ತ್ರೇತಾಯುಗ ದ್ವಾಪರಯುಗದಲ್ಲಿ ಹರಿಶ್ಚಂದ್ರ, ರಾಮ, ರಾವಣಾದಿಗಳು ಸತ್ತರು. ಕಲಿಯುಗದಲ್ಲಿ ಅನಂತರು ಸತ್ತರು. ನಿನ್ನ ಪಿತೃಪಿತಾಮಹರೂ ಸತ್ತರು. ನಿನ್ನ ಜೇಷ್ಠಕನಿಷ್ಠರುಗಳೂ ಸತ್ತರು ಕಾಣಾ. ಹೀಗೆ ಕಂಡು ಕೇಳಿಯೂ ಮರುಳು ಮಾನವಾ, ಸಾವು ದಿಟವೆಂದರಿ, ಸಂದೇಹ ಬೇಡ. ಸಾಯಲ್ಕೆ ಮುನ್ನ ಧನ ಕೆಡದ ಹಾಗೆ ಸತ್ಪಾತ್ರಕ್ಕೆ ಮಾಡಿ, ಮನ ಕೆಡದ ಹಾಗೆ ಶಿವನನ್ನೇ ಧ್ಯಾನಿಸಿ, ತನು ಕೆಡದ ಹಾಗೆ ಶಿವನನ್ನೇ ಪೂಜಿಸು. 'ಬಾಲಂ ವೃದ್ಧಂ ಮೃತಂ ದೃಷ್ಟ್ವಾ ಮೃತಂ ವಿಷ್ಣ್ವಾದಿದೈವತಂ ಅಹಂ ಮೃತೋ ನ ಸಂದೇಹೋ ಶೀಘ್ರಂ ತು ಶಿವಪೂಜನಂ' ಎಂಬುದನರಿದು, ಮರೆಯಬೇಡ. ಹೆಣ್ಣ ನಚ್ಚಿ, ಅಶುಭವ ಮಚ್ಚಿ, ಮರೆಯಬೇಡ, ಅವಳು ನಿನ್ನ ನಂಬಳು. ನೀನು ತನು ಮನ ಧನವನಿತ್ತಡೆಯೂ ಪರಪುರುಷರ ನೆನೆವುದ ಮಾಣಳು. ಅದನು ನೀನೇ ಬಲ್ಲೆ. ಹೊನ್ನ ನಚ್ಚಿ ಕೆಡದಿರು ಸತಿಸುತದಾಯಾದ್ಯರಿಂದಂ ರಾಜಾದಿಗಳಿಂದಂ ಕೆಡುವುದು. ಅಲ್ಲಿ ನೀನು ಸುಯಿಧಾನದಿಂ ರಕ್ಷಿಸಲು ಧರ್ಮಹೀನನ ಸಾರೆ, ನಿಲ್ಲೆನೆಂದು ನೆಲದಲಡಗಿ ಹೋಗುತ್ತಲಿದೆ, ನೋಡ ನೋಡಲು, ಹೋಗದ ಮುನ್ನ ಅರಿವನೆ ಅರಿದು, ಮರೆವನೆ ಮರೆದು ಮಾಡಿರಯ್ಯಾ, ಶಿವಮಹೇಶ್ವರರಿಗೆ ತನು ಮನ ಧನವುಳ್ಳಲ್ಲಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.