Index   ವಚನ - 140    Search  
 
ದೇವ ದಾನವ ಮಾನವ ಋಷಿಜಂಗಳೆಲ್ಲರನು ಮಹಾಲಿಂಗವ ಕಂಡೆಹೆವೆಂದು ಅನೇಕಕಾಲಂಗಳಲ್ಲಿ ತಪವ ಮಾಡಿ, ಧ್ಯಾನವ ಮಾಡಿ, ಜಪವ ಮಾಡಿಯೂ ಕಾಣಲರಿಯದೆ ಬಳಲುತ್ತೈದಾರೆ. ಅವರಲ್ಲಿ ಸಮರ್ಥಪುರುಷರು ಕಂಡಡೆಯೂ ಕಂಡರೇನು ಫಲ? ಲಿಂಗಕ್ಕೆ ಒಲಿಯರು, ಲಿಂಗವನೊಲಿಸಿಕೊಳಲರಿಯರು, ಕೂಡಲರಿಯರು. ಅಲ್ಪಭೋಗಂಗಳನಿಚ್ಛೈಸಿ, ಆ ಭೋಗಪದವ ಪಡೆದು, ಪುಣ್ಯಪಾಪಂಗಳ ಬಲೆಯೊಳು ಬೀಳುತ್ತಿಹರು. ಅವರುಗಳ ಪರಿಯಿಲ್ಲ, ಎನಗೆ. ಶಿವ ಶಿವಾ ಮಹಾದೇವ, ಮಹಾಲಿಂಗನ ಕರುಣವನು ಏನೆಂದುಪಮಿಸಬಹುದು! ಶ್ರೀಗುರುವಾಗಿ ಕರುಣಿಸಿ ಶ್ರೀಹಸ್ತದಿಂದೆನಗೆ ಜನನವ ಮಾಡಿ ಮಾತಾಪಿತನು ತಾನೆಯಾದನು. ಮಹಾದೀಕ್ಷೆಯ ಮಾಡಿ ಶ್ರೀಗುರು ತಾನೆಯಾದನು. ಮಹಾಮಂತ್ರೋಪದೇಶವ ಮಾಡಿ ಮಂತ್ರರೂಪಾಗಿ ಕರ್ಣದಲ್ಲಿ ಭರಿತವಾದನು, ಪ್ರಸಾದರೂಪಾಗಿ ಜಿಹ್ವೆಯಲ್ಲಿ ಭರಿತವಾದನು, ಮಹಾವಿಭೂತಿಯಾಗಿ ಬಾಳದಲ್ಲಿ ಭರಿತವಾದನು, ಸರ್ವಾಂಗಭರಿತವಾದನು. ಮತ್ತೆ ಮತ್ತೆ ಮಹಾಚೋದ್ಯ, ಶ್ರೀಗುರು ಲಿಂಗಮೂರ್ತಿಯನು ಪ್ರಾಣವನೇಕೀಭವಿಸಿ ಪ್ರಾಣಲಿಂಗವಾದನಾಗಿ ಅಂಗದ ಮೇಲೆ ಬಿಜಯಂಗೈದು ಅಂಗಲಿಂಗವಾದನು. ಮಹಾಲಿಂಗವಾಗಿ ಕರಸ್ಥಲದಲ್ಲಿ ನಿರಂತರ ಪೂಜೆಗೊಳ್ಳುತ್ತಿದ್ದನು, ಇದೂ ವಿದಿತ. ಸುಜ್ಞಾನವನೂ ಪ್ರಸಾದವನೂ ಕರುಣಿಸಲೆಂದು ಶರಣಭರಿತನಾಗಿ ಬಂದು ಕರುಣಿಸಿದನು. ಇಂತು, ಶ್ರೀಗುರು ಲಿಂಗಜಂಗಮರೂಪಾಗಿ ಕರುಣಿಸಿ, ಪ್ರಸನ್ನನಾಗಿ ಮಹಾಪ್ರಸಾದವ ಕರುಣಿಸಿ, ಪ್ರಸಾದರೂಪವಾಗಿ ಸಲುಹಿದನು. ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯ ಚತುರ್ವಿಧಪದಕ್ಕೆ ಘನಪದದಾಸೋಹದಲ್ಲಿರಿಸಿದನು. ಸರ್ವಪದ ಮಹಾಪದಕ್ಕೆ ವಿಶೇಷ ಲಿಂಗಪದದಲ್ಲಿರಿಸಿದೆನು. ಶಿವ ಶಿವಾ ಮಹಾಪದವ ನಾನೇನೆಂದುಪಮಿಸಲರಿಯೆ. ಸದ್ಗುರುಕೃಪೆ, ವಾಙ್ಮನೋತೀತ. ಮಹಾಘನಪರಿಣಾಮಸುಖವನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ತಾನೆ ಬಲ್ಲ.