Index   ವಚನ - 149    Search  
 
ನಾನಾವಿಧದ ಪೂಜೆಗಳ ಪೂಜಿಸಿದವರೆಲ್ಲಾ ಭಕ್ತರೆ, ಹೇಳಿರಣ್ಣಾ. ವಿಷ್ಣು ಮೊದಲಾದ ದೇವಜಾತಿಗಳು ತಾರಕ ರಾವಣಾದಿ ದೇವ ದಾನವ ಮಾನವರನೇಕರು ಆ ಮಹಾದೇವನ ಪೂಜಿಸಿ ಫಲದಾಯಕರಾಗಿ ಪದಂಗಳ ಪಡೆದರು. ಈ ಫಲದಾಯಕರೆಲ್ಲರೂ ಸದ್ಭಕ್ತರಪ್ಪರೆ? ಅಲ್ಲ, ಅವರೆಲ್ಲರೂ ಉಪಾಧಿಕರು. ಪರಧನ ಪರಸ್ತ್ರೀ ಪರದೈವವ ಬಿಟ್ಟು ಪಂಚೇಂದ್ರಿಯ ಷಡ್ವರ್ಗಂಗಳ ಬಿಟ್ಟು ನಿರುಪಾಧಿಕರಾಗಿ ನಿರಂತರ ಪೂಜಿಸಿದಡೆ, ಆತನೇ ಸದ್ಭಕ್ತನು, ಆತನೇ ಮಹಾಮಹಿಮನು, ಆತನೇ ಮಹಾದೇವನಯ್ಯಾ. ಆ ಭಕ್ತಂಗೆ ಭಕ್ತದೇಹಿಕ ದೇವನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.