Index   ವಚನ - 167    Search  
 
ಪರಬ್ರಹ್ಮನಿಂದ ಜೀವನಾಯಿತ್ತೆಂಬುವನೊಬ್ಬ ವಾದಿ. ಆತ್ಮನು ಪಶು, ಪಾಶಬದ್ಧನು, ಅನಾದಿಮಲಯುಕ್ತನೆಂಬುವನೊಬ್ಬ ವಾದಿ. ಇವರಿಬ್ಬರು ತರ್ಕಕ್ಕೆ ಸಿಲುಕಿ ದುಃಖಕ್ಕೊಳಗಾದರು. ಅದೆಂತೆಂದಡೆ:ಆತ್ಮನು ಅನಾದಿಮಲಸಂಬಂಧಿಯಾದಡೆ ಆತ್ಮನ ಸ್ವರೂಪ ಮಲಸ್ವರೂಪ ಬಲ್ಲಡೆ ನೀವು ಹೇಳಿರೋ. ಅರಿಯದಿರ್ದಡೆ ಕೇಳಿರೋ: ಪೃಥ್ವಿ ಅಪ್ಪು ಕೂಡಿ ಸ್ಥೂಲತನು, ವಾಯು ತೇಜ ಕೂಡಿ ಸೂಕ್ಷ್ಮತನು, ಅಂಬರ ಅಹಂಕಾರ ಕೂಡಿ ಕಾರಣತನು. ಈ ತನುತ್ರಯವಿಲ್ಲದಂದು, ಪಂಚತತ್ತ್ವಂಗಳ ಶಾಖೆ ತಲೆದೋರದಂದು, ಆದಿ-ಅನಾದಿ, ಸ್ವರೂಪು-ನಿರೂಪು, ಹಮ್ಮು-ಬಿಮ್ಮು, ಯುಗ-ಜುಗ, ಸುರಾಳ-ನಿರಾಳವಿಲ್ಲದಂದು, ಆತ್ಮನಲ್ಲಿ ಮಲ ಹುದುಗಿರ್ದ ಭೇದವ ತಿಳಿದು ರೂಹಿಸಿ ಹೇಳಬಲ್ಲಡೆ ಸಿದ್ಧಾಂತಿಯೆಂಬೆ, ಹಮ್ಮಿದ ಶಿವನೆ ಜೀವನು, ಹಮ್ಮಳಿದ ಜೀವನೆ ಶಿವನಾದಡೆ ಸೃಷ್ಟಿಸ್ಥಿತಿಸಂಹಾರಂಗಳೇಕಾದವು? ವಾಚ್ಯಾವಾಚ್ಯಂಗಳೇಕಾದವು? ಸ್ಥಾನಸ್ಥಾನಂಗಳೇಕಾದವು? ಪಕ್ಷಾಪಕ್ಷಂಗಳೇಕಾದವು? ದೇಹದೇಹಂಗಳೇಕಾದವು? ಆದಡಾಗಲಿ ಬ್ರಹ್ಮಕ್ಕೆ ತಥ್ಯ-ಮಿಥ್ಯ, ರಾಗ-ದ್ವೇಷ, ಹಮ್ಮು-ಬಿಮ್ಮು, ಮದ-ಮತ್ಸರ, ನಾ ನೀನೆಂಬ ಭ್ರಾಂತುಸೂತಕವುಂಟೆ? ಅದಲ್ಲ ನಿಲ್ಲು. ಬ್ರಹ್ಮಕ್ಕೆ ಹಮ್ಮು ಹೋಹ-ಬ್ರಹ್ಮ ಭೇದವ ತಿಳಿದು, ಸಂಕಲ್ಪ-ವಿಕಲ್ಪವಿಲ್ಲದೆ, ಸ್ತುತಿ-ನಿಂದೆಗಳನರಿಯದೆ, ಪಕ್ಷಾಪಕ್ಷಂಗಳನರಿದೆ, ಕಾಮ-ನಿಃಕಾಮವಿಲ್ಲದೆ, ಭೀತಿ-ನಿರ್ಭೀತಿಯಿಲ್ಲದೆ, ನಿರಂಗಸ್ವರೂಪನಾದಡೆ ವೇದಾಂತಿಯೆಂದೆ. ಈ ಉಭಯ ವಾದ ಹೊದ್ದರು ಶಿವಶರಣರು. ಆದಿ ಅನಾದಿಯಿಂದತ್ತಲಾದ ಶರಣಲಿಂಗಸಂಬಂಧವನರಿದರಾಗಿ ಅಭೇದ್ಯರಯ್ಯಾ. ಅದೆಂತೆಂದಡೆ: ಸತ್ತುವೆನಿಸಿ ಶಬ್ದನಿಃಶಬ್ದಕ್ಕೆ ಬಾರದ ನಿಶ್ಶೂನ್ಯ ಲಿಂಗವೆ ಪ್ರಾಣವಾಗಿ, ಚಿತ್ತುವೆನಿಸಿ ನಾಮನಿರ್ನಾಮಕ್ಕೆ ಬಾರದ ಸ್ವರೂಪು ನಿರೂಪವಲ್ಲದ ಶರಣನೆ ಅಂಗವಾಗಿ, ಈ ಉಭಯ ಸಂಪುಟದಿಂದ ಸಕಲನಿಷ್ಕಲವೆನಿಸಿತ್ತು. ಈ ಸಕಲ ನಿಷ್ಕಲತತ್ತ್ವವೆ ತನ್ನ ಶಕ್ತಿಸಮರಸಸಂಭಾಷಣೆಯಿಂದ ಲೀಲೆದೋರಲಾಗಿ ತಾನೆ ಗುರುವಾದ, ತಾನೆ ಶಿಷ್ಯನಾದ, ತಾನೆ ಲಿಂಗವಾದ, ತಾನೆ ಜಂಗಮವಾದ, ತಾನೆ ಮಂತ್ರವಾದ, ತಾನೆ ಪ್ರಸಾದವಾದ, ತಾನೆ ಸರ್ವಚೈತನ್ಯಾತ್ಮಕನಾದ. ಇಂಥಾ ಭೇದವ ತನ್ನಿಂದ ತಾನೆ ಅರಿದನಾಗಿ ವೇದಾಂತ ಸಿದ್ಧಾಂತವೆಂಬ ವಾಗ್ಜಾಲವ ನುಡಿಯನು. ತಾನೆ ಪರಿಪೂರ್ಣನಾಗಿ ತರ್ಕಕ್ಕತರ್ಕ್ಯನು, ಸಾಧ್ಯಕ್ಕಸಾಧ್ಯನು, ಭೇದ್ಯಕ್ಕಭೇದ್ಯನು, ಇದು ಕಾರಣ ದ್ವೈತಾದ್ವೈತವ ಮೀರಿನಿಂದ ನಿಜಸುಖಿ ನಿಮ್ಮ ಶರಣನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.