Index   ವಚನ - 187    Search  
 
ಪ್ರಾಣಲಿಂಗಸಂಬಂಧಿಯಾಗಿ, ಅಂಗಲಿಂಗಸಂಬಂಧಿಯಾಗಿ, ಕರಸ್ಥಲದಲ್ಲಿ ಲಿಂಗವ ಬಿಜಯಂಗೈಸಿಕೊಟ್ಟು, ಶ್ರೀಗುರು ರಕ್ಷಿಸಿದ ಬಳಿಕ, ಲಿಂಗವೇ ಪ್ರಾಣ, ಪ್ರಾಣವೇ ಲಿಂಗ ಲಿಂಗವೇ ಅಂಗ, ಅಂಗವೇ ಲಿಂಗ. ಇಂತು ಅಂತರಂಗ ಬಹಿರಂಗ ಲಿಂಗವಾಗಿ ಸರ್ವಾಂಗ ಲಿಂಗವಾದ ಬಳಿಕ ಲಿಂಗದ ನಡೆ, ಲಿಂಗದ ನುಡಿ, ಪಂಚೇಂದ್ರಿಯಗಳೆಲ್ಲವೂ ಲಿಂಗೇಂದ್ರಿಯಂಗಳು. ಅಂತಃಕರಣ ಚತುಷ್ಟಯಂಗಳು ಲಿಂಗಕರಣಂಗಳು. ವರ್ತಕ ನಿವರ್ತಕ ಇದು ಸಹಜ ಸತ್ಯ ಪ್ರಾಣಲಿಂಗಸಂಬಂಧಿ, ಅನ್ಯವರ್ತಕ ವರ್ತಿಸಿದಡೆ ಪ್ರಾಣಲಿಂಗಸಂಬಂಧಿಯಲ್ಲ, ಅವನೂ ಪೂಜಕರಂತೆ ಪೂಜಕನಪ್ಪನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.