Index   ವಚನ - 315    Search  
 
ಹಸಿದಡೆ ಉಣಬಹುದೆ ನಸುಗುನ್ನಿ ತುರುಚಿಯನು? ಅವಸರಕಿಲ್ಲದ ದೊರೆಗೆ ಅರ್ಥವಿದ್ದಲ್ಲಿ ಫಲವೇನು? ಸಾಣೆಯ ಮೇಲೆ ಶ್ರೀಗಂಧವ ತೇವರಲ್ಲದೆ ಇಟ್ಟಿಗೆಯ ಮೇಲೆ ತೇಯಬಹುದೆ? ರಂಭೆಯ ನುಡಿ ಸಿಂಬಿಗೆ ಶೃಂಗಾರವೆ? ಜ್ಞಾನಿಯ ಕೂಡ ಜ್ಞಾನಿ ಮಾತನಾಡುವನಲ್ಲದೆ ಅಜ್ಞಾನಿಯ ಕೂಡ ಜ್ಞಾನಿ ಮಾತನಾಡುವನೆ? ಸರೋವರದೊಳಗೊಂದು ಕೋಗಿಲೆ ಸ್ವರಗೆಯ್ಯುತ್ತಿದ್ದಡೆ ಕೊಂಬಿನ ಮೇಲೊಂದು ಕಾಗೆ ಕರ್ರೆನ್ನದೆ? ಅಂತೆ ಇದ್ದತ್ತು. ಬರದಲ್ಲಿ ಬರಡ ಕರೆದೆಹೆನೆಂದು, ಕಂದಲ ಕೊಂಡು ಹೋದರೆ, ಕಂದಲೊಡೆದು ಕೈ ಮುರಿದಂತಾಯಿತ್ತು ಗುಹೇಶ್ವರಾ.