Index   ವಚನ - 216    Search  
 
ಮಹಾಜ್ಯೋತಿಯು ಸೋಂಕಿದ ಉತ್ತಮಾಧಮತೃಣ ಮೊದಲಾದವೆಲ್ಲವೂ ಮಹಾಜ್ಯೋತಿಯಪ್ಪವು ತಪ್ಪದು, ನೋಡಿರೇ ದೃಷ್ಟವ, ಮತ್ತಂತಿಂತೆಂದುಪಮಿಸಲುಂಟೇ? ಪರಂಜ್ಯೋತಿ ಸದ್ಗುರುಲಿಂಗವು ಸೋಂಕಿದ ಸದ್‍ಭಕ್ತನ ಅಂತರಂಗಬಹಿರಂಗಸರ್ವಾಂಗ ಪರಂಜ್ಯೋತಿರ್ಲಿಂಗವು, ಮತ್ತೆ, ದೇಹವೆಂದು ಪ್ರಾಣವೆಂದು ಆಧಾರಸ್ವಾಧಿಷ್ಠಾನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೆ ಬ್ರಹ್ಮರಂಧ್ರವೆಂದು ವರ್ಣ ದಳ ಛಾಯೆ ಅಧಿದೇವತೆಯೆಂದು ವಿವರಿಸಿ ನುಡಿಯಲುಂಟೆ? ಪಂಚಭೌತಿಕದ ತನುವಿನಂತೆ ಪಂಚವಿಂಶತಿ ತತ್ತ್ವವನು ಸಂಬಂಧಿಸಿ ನುಡಿಯಲುಂಟೇ, ಕೇವಲ ಜ್ಯೋತಿರ್ಮಯಲಿಂಗತನುವಿಂಗೆ? ಸದ್ಭಕ್ತನ ಅಂಗ ಲಿಂಗ, ಮನ ಲಿಂಗ, ಪ್ರಾಣ ಲಿಂಗ, ಭಾವ ಲಿಂಗ, ಪಂಚವಿಶಂತಿ ತತ್ತ್ವಂಗಳೆಲ್ಲವೂ ಲಿಂಗತತ್ವ. ಇದು ಕಾರಣ, ಲಿಂಗವಂತನ ತನು ಸರ್ವಾಂಗಲಿಂಗವೆಂಬುದಯ್ಯ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.