ಲಿಂಗದೊಡನೆ ಸಹಭೋಜನ ಮಾಡುವ
ಸದ್ಭಕ್ತನ ಆಚರಣೆ ಕ್ರಿಯೆಗಳೆಂತುಂಟಯ್ಯಾ ಎಂದಡೆ;
ಲಿಂಗ ಜಂಗಮದ ಕುಂದು ನಿಂದೆಯಂ ಕೇಳಲಾಗದು,
ಕೇಳಿದಡೆ ಆ ನಿಂದಕನಂ ಕೊಲುವುದು,
ಕೊಲಲಾರದಿರ್ದಡೆ ತನ್ನ ತಾನಿರಿದುಕೊಂಡು ಸಾವುದು,
ಸಾಯಲಾರದಿರ್ದಡೆ ಅವನ ಬಯ್ವದು.
ತನ್ನ ಅರ್ಥಪ್ರಾಣಾಭಿಮಾನವು ಶಿವಾರ್ಪಣವಾಯಿತ್ತೆಂದು
ಮನದಲ್ಲಿ ಸಂತೋಷವ ತಾಳಿದಡೆ ಪ್ರಸಾದವುಂಟು.
ಇಂತಲ್ಲದೆ ಮನದಲ್ಲಿ ನೋವ ತಾಳಿದಡೆ ಆಚಾರಭ್ರಷ್ಟನು.
ಎನ್ನ ಮನೆ, ಎನ್ನ ಧನ, ಎನ್ನ ಸತಿಯೆಂಬನ್ನಕ್ಕರ
ಅವನು ಭವಿಯ ಸಮಾನ.
ಭಕ್ತನಲ್ಲ, ಪ್ರಸಾದಿಯಲ್ಲ, ಶೀಲವಂತನಲ್ಲ.
ಅವನಿಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ,
ಪಾದತೀರ್ಥವಿಲ್ಲ, ಪ್ರಸಾದ ಮುನ್ನವೇ ಇಲ್ಲ.
ಅವನಿಗೆ ಕುಂಭೀಪಾತಕನಾಯಕನರಕ ತಪ್ಪದು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.