Index   ವಚನ - 240    Search  
 
ಲಿಂಗವಂತಂಗೆ ಲಿಂಗವು ಮಾಡಿದ ಪದವನು ಲಿಂಗವಂತರೆ ಬಲ್ಲರು. ಕೇವಲ ಸಾಕ್ಷಾತ್ಪರವಸ್ತುವನು ಕರಸ್ಥಲದಲ್ಲಿ ಮೂರ್ತಿಯಾಗಿ ಬಿಜಯಂಗೈಸಿ ಕೊಟ್ಟನಾಗಿ ಸಾಲೋಕ್ಯಪದ, ಅಂಗದ ಮೇಲೆ ನಿರಂತರ ಪೂಜೆಗೊಳ್ಳುತ್ತಿಹನಾಗಿ ಸಾಮೀಪ್ಯಪದ, ಸದ್ಭಕ್ತರೂಪ ಮಾಡಿದವನಾಗಿ ಸಾರೂಪ್ಯಪದ, ಪ್ರಾಣಲಿಂಗವ ಮಾಡಿ ಅವಿನಾಭಾವವ ಮಾಡಿದನಾಗಿ ಸಾಯುಜ್ಯಪದ, ಇಂತೀ ಚತುರ್ವಿಧ ಪದವಾಯಿತ್ತು. `ಲಿಂಗಮಧ್ಯೇ ಶರಣಂ ಶರಣಮಧ್ಯೇ ಲಿಂಗಂ' ಎಂಬುದಾಗಿ ಸರ್ವಭೋಗಂಗಳನೂ ಸಹವಾಗಿ ಭೋಗಿಸಿ ಪ್ರಸಾದವನಿಕ್ಕಿ ಸಲಹಿದನಾಗಿ ಸದ್ಯೋನ್ಮುಕ್ತನು, ಸರ್ವಾಂಗಲಿಂಗವು. ಈ ತಾತ್ಪರ್ಯದ ಮರ್ಮವನು ಲೋಕದ ಜಡಜೀವಿಗಳೆತ್ತ ಬಲ್ಲರಯ್ಯಾ? ಬಲ್ಲಡೆ, ಲಿಂಗಾನುಭಾವಿಗಳೇ ಬಲ್ಲರಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.