Index   ವಚನ - 258    Search  
 
ಲಿಂಗವೇ ಪ್ರಾಣ, ಪ್ರಾಣವೇ ಲಿಂಗವಾದ ಪ್ರಾಣಲಿಂಗಿಯ ಪ್ರಾಣಲಿಂಗಕ್ಕೆ, ಧ್ಯಾನಾಮೃತ ಪಂಚಾಕ್ಷರಂಗಳ ಪಂಚಾಮೃತದಿಂ ಮಜ್ಜನಕ್ಕೆರೆದು, ಆ ಲಿಂಗಕ್ಕೆ ಮನವೇ ಪುಷ್ಪ, ಬುದ್ಧಿಯೆ ಗಂಧ, ಚಿತ್ತವೇ ನೈವೇದ್ಯ. ಅಹಂಕಾರವಳಿದ ನಿರಹಂಕಾರದ ಆರೋಗಣೆಯ ಮಾಡಿಸಿ, ಪರಿಣಾಮದ ವೀಳ್ಯವನಿತ್ತು, ಸ್ನೇಹದಿಂದ ವಂದನೆಯಂ ಮಾಡಿ, ಆ ಪ್ರಾಣಲಿಂಗಕ್ಕೆ ಬಹಿರಂಗದ ಪೂಜೆಯ ಪರಿಯಲಿ ಅಂತರಂಗದ ಪೂಜೆಯ ಮಾಡುವುದು. ಬಹಿರಂಗದ ಪೂಜೆಯ ಪ್ರಾಣಲಿಂಗಕ್ಕೆ ಅಂತರಂಗದ ವಸ್ತುಗಳೆಲ್ಲವನ್ನು ತಂದು, ಬಹಿರಂಗದ ವಸ್ತುವಿನಲ್ಲಿ ಕೂಡಿ, ಅಂತರ್ಬಹಿರುಭಯ ಲಿಂಗಾರ್ಚನೆಯ ಮಾಡಲು, ಅಂತರಂಗ ಬಹಿರಂಗ ಭರಿತನಾಗಿಪ್ಪನಾ ಶಿವನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.