Index   ವಚನ - 270    Search  
 
ವೇದಂಗಳು ದೈವವೆಂಬ ವಿಪ್ರರಂತಹ ಮರುಳರುಂಟೇ ತ್ರಿಜಗದಲ್ಲಿ? ವೇದವೆಂಬುದೊಂದು ಸಾಧಕ ಸಂಪತ್ತು. ವೇದಂಗಳು ಶ್ವೇತ, ಅಗಸ್ತ್ಯ, ವಿಶ್ವಾಮಿತ್ರಮುನಿಗಳಿಂದಾದವು. ಶಬ್ದಗಾಂಭೀರ್ಯ ಶ್ರುತಿಕೋಟಿ ಚರಣಕಮಲನೆಂಬ ಲಿಂಗದ ಕೈಯಲ್ಲಿ ಕಲಿತ ವೇದಂಗಳು ಅಜ್ಞಾನಸಂಗವಾಗಿ ಅಗೋಚರವಾಗಿ ನುಡಿದವು. ಋಗ್ವೇದ-`ನಾಹಂಕಾರೋ ಬ್ರಹ್ಮತೇಜಃʼ ಎಂದುದಾಗಿ, ಯಜುರ್ವೇದ-`ನಾಹಂಕಾರೋ ಲಕ್ಷ್ಮೀಪತಿರ್ವಿಷ್ಣುತೇಜಃʼ ಎಂದುದಾಗಿ, ಸಾಮವೇದ-`ನಾಹಂ ದೇವೋ ರುದ್ರತೇಜಃʼ ಎಂದುದಾಗಿ, ಅಥರ್ವಣವೇದ-`ನಾಹಂ ಸ್ಥಲಂʼ ಎಂದುದಾಗಿ, ಕುಲಮದದಿಂದ ಬ್ರಹ್ಮ ಕೆಟ್ಟ, ಬಲಮದದಿಂದ ವಿಷ್ಣು ಕೆಟ್ಟ, ದೈವಮದದಿಂದ ರುದ್ರ ಕೆಟ್ಟ, ಛಲಮದದಿಂದ ಇಂದ್ರ ಕೆಟ್ಟ, ಇಂತೀ ನಾಲ್ಕು ಶ್ರುತಿಗಳು ತಮ್ಮ ಗರ್ವದಿಂದ ನೂಂಕಿಸಿಕೊಂಡವು ಶಿವನ ಅರಮನೆಯ ಬಾಗಿಲಲ್ಲಿ. ಮತ್ತಾ ಚತುರ್ವೇದಂಗಳು ಬಂದು ಲಿಂಗದ ಚತುರ್ದಿಶೆಯಲ್ಲಿ ಓಲೈಸಿ, ಕೈಮುಗಿದುಕೊಂಡು ಹೊಗಳುತ್ತಿದ್ದವು. ಅದೆಂತೆಂದಡೆ ಶ್ರುತಿ, `ಓಂ ಜಯತತ್ವಾನಾಂ ಪುರುಷಮೇರು ಕಾಮ್ಯಾನಾಂ ಪುಣ್ಯಜಪಧ್ಯಾನಾನಾಂ ಸರ್ವಜನ್ಮವಿನಾಶಿನಾಂ ಆದಿ ಅನಾದಿ ಪಿತ್ರೂಣಾಂ ಅಜಕೋಟಿಸಹಸ್ರವಂದ್ಯಾನಾಂ ದೇವಕೋಟಿಚರಣಕಮಲಾನಾಂʼ ಎಂದು ವೇದಂಗಳು ದೇವರ ಚರಣದ ಕುರುಹ ಕಾಣವು. ಆದಿಯಲ್ಲಿ ನಮ್ಮ ಪುರಾತನರು ವೇದವನೋದಿದರೆ? ಇಲ್ಲ. ಕಲ್ಲಿಲಿಟ್ಟರು, ಕಾಲಿಲೊದೆದರು, ಬಿಲ್ವಪತ್ರದ ಮರದ ಕೆಳಗೆ ಲಿಂಗವಂ ಪುಟ್ಟಿಸಿ ನಿಷ್ಠೆಯ ಪಡೆದರು. ಮನೆಯ ಬಾಗಿಲ ಕಾಯಿಸಿಕೊಂಡರು, ಆಡಿಸಿದರು, ಅಡಗಿಸಿದರು, ಓಡಿದ ಲಿಂಗವಂ ತಂದು ಪ್ರತಿಷ್ಠೆಯಂ ಮಾಡಿದರು. ಇಂತಪ್ಪ ದೃಷ್ಟವ ಸಾಧಿಸಿದರು ನಮ್ಮ ಪುರಾತನರು. ನಿಮ್ಮವರು ವೇದವನೋದಿದರೆಂಬುದನರಿದು. ಅವರನೊಲ್ಲದೆ ಬಿಟ್ಟ ಕಾಣಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.