Index   ವಚನ - 301    Search  
 
ಶಿವ ಶಿವ! ಮಾಹೇಶ್ವರರ ಮಹಾತ್ಮೆಯನೇನೆಂದುಪಮಿಸಬಹುದಯ್ಯಾ, ವಾಙ್ಮನೋತೀತರು. ಕೋಟಿ ಕೋಟಿಯಾಯುಷ್ಯ ಕೋಟಿ ಕೋಟಿ ಜಿಹ್ವೆಯುಳ್ಳರೆಯೂ ಸ್ತುತಿಸಲರಿಯದು. `ಶಂಭೋರ್ಮಾಹಾತ್ಮ್ಯಮಣುಪ್ರಮಾಣಜಾನಂತಃ' ಎಂದು ಲಿಂಗದ ಮಹಾತ್ಮೆಯನು ಅಣುಪ್ರಮಾಣವೂ ಅರಿಯಬಾರದೆಂದಡೆ ಲಿಂಗವಂತರ ಮಹಾತ್ಮೆಯನೇನೆಂದುಪಮಿಸಬಹುದಯ್ಯಾ! ಲಿಂಗಾಲಿಂಗೀ ಮಹಜ್ಜೀವೀ ಲಿಂಗಾಲಿಂಗೀ ತು ರಕ್ಷಕಃ ಲಿಂಗಾಲಿಂಗೀ ಮಮ ಸ್ವಾಮೀ ಲಿಂಗಾಲಿಂಗೀ ಮನೋಹರಃ' ಈ ಪರಿ ದೇಹಲಿಂಗಕ್ಕೆ ಪ್ರಾಣಲಿಂಗಕ್ಕೆ ತಾನಾಗಿಹ ಲಿಂಗವಂತನ ಮಹಾತ್ಮೆಯನೇನೆಂದುಪಮಿಸಬಹುದಯ್ಯಾ! ಶಿವನೇ ಬಲ್ಲ, ಶಿವನೇ ಬಲ್ಲ. ಮದ್ಭಕ್ತಜನಮಾಹಾತ್ಮ್ಯಂ ಕೋ ವಾ ಜಾನಾತಿ ತತ್ತ್ವತಃ ಜಾನೇsಹಂ ತ್ವಂ ತು ಜಾನಾಸಿ ನಂದೀ ಜಾನಾತಿ ವಾ ಗುಹಃ' ಶಿವನು, ನಂದೀಶ್ವರ, ಗುಹನು ಇವರೇ ಬಲ್ಲರು. ಸಜ್ಜನಶುದ್ಧಶಿವಾಚಾರಸಂಪನ್ನರಪ್ಪ ನಮ್ಮ ಸದ್ಭಕ್ತರೇ ಬಲ್ಲರು. ಸಾಮಾನ್ಯ ತರದ ದೇವದಾನವ ಮಾನವರಿಗೆಯೂ ಅರಿಯಬಾರದು. ಅದೆಂತೆನಲು ಕೇಳಿರೆ: ಬ್ರಹ್ಮ ವಿಷ್ಣು ಇಂದ್ರ ಚಂದ್ರ ರವಿ ಕಾಮ ದಕ್ಷ ಮೊದಲಾದ ದೇವಜಾತಿಗಳು, ತಾರಕ ರಾವಣಾದಿ ದಾನವರು, ವ್ಯಾಸಋಷಿಯರುಗಳು, ದಕ್ಷಾಧ್ವರಕ್ಕೆ ಬಂದ ಋಷಿಗಳನೇಕರು ವೇದಶಾಸ್ತ್ರ ಪುರಾಣ ಆಗಮಾದಿಯಾದ ಅಷ್ಟಾದಶ ವಿದ್ಯಂಗಳನೂ ಓದಿ ಕೇಳಿ ತಮ್ಮನು ಕೇಳಿದವರಿಗೆಯೂ ಹೇಳಿ, ಸರ್ವಜ್ಞರೆನಿಸಿಕೊಂಡರು. ಮಹದೈಶ್ವರ್ಯಸಂಪನ್ನರಾಗಿ ಮದಂಗಳು ಹೆಚ್ಚಿ ಶಿವನನು ಮರೆದರು. `ಅಹಂ ಬ್ರಹ್ಮ' ಎಂದು ಪರಧನ ಪರಸ್ತ್ರೀಯರಿಗೆ ಅಳುಪಿದರು. ಶಿವಮಾಹೇಶ್ವರನಿಂದೆಯಂ ಮಾಡಿದರು. ಈ ಪರಿಯಲೂ ತಪ್ಪಿ ನಡೆದು, ತಪ್ಪಿ ನುಡಿದು ಹಸ್ತಚ್ಛೇದನ ಶಿರಚ್ಛೇದನವ ಮಾಡಿಕೊಂಡು ಹೋದರು. ಅನೇಕ ಪರಿಯಲೂ ಭಂಗಿತರಾದರು. ಮಾನಹಾನಿ ಹೊಂದಿದರು, ಕಷ್ಟಜನ್ಮಂಗಳಲ್ಲಿ ಜನಿಸಿದರು. ಮರಳಿ ಮತ್ತೆ ಅರಿದು ಶಿವಾರಾಧನೆಯ ಮಾಡಿ, ಶಿವಸ್ತೋತ್ರಮಂ ಮಾಡಿ ಮಾಹೇಶ್ವರರ ಪೂಜಿಸಿ, ಮರಳಿ ನಿಜಪದಂಗಳ ಹಡೆದರು. ಈ ಪರಿಯ, ಅರಿವು ಮರವೆಯುಳ್ಳ ದ್ವಂದ್ವಗ್ರಸ್ತರು ಬಲ್ಲರೆ? ಮಾಹೇಶ್ವರರ ಮಹಾತ್ಮೆಯ ನಮ್ಮ ಸದ್ಭಕ್ತರೇ ಬಲ್ಲರು. ಅದೆಂತೆಂದಡೆ ಕೇಳಿರೆ: ವೇದಾದಿ ಅಷ್ಟಾದಶವಿದ್ಯಾಪರಿಚಿತರು, ಅಂತಾಗಿ ಎಮ್ಮ ಮಾಹೇಶ್ವರರೇ ಬಲ್ಲರು. ಉಳಿದ ದೇವ ದಾನವ ಮಾನವರುಗಳಿಗೆಯೂ ಅರಿಯಬಾರದು. ಅಂತಪ್ಪವರಿಗೆ ಆ ವಿಧಿ. ಇನ್ನು ಅಲ್ಪಾಯುಷ್ಯರಪ್ಪ ಮನುಷ್ಯರುಗಳಿಗೆ ವೇದಶಾಸ್ತ್ರ ಪುರಾಣಂಗಳ ಬಹಳ ಓದಲಿಕೆ ತೆರಹಿಲ್ಲ. ಕಿಂಚಿತ್ತೋದಿದರೂ ಕೇಳಿದರೂ ಇಲ್ಲ, ಮಹಾಜ್ಞಾನಿಗಳ ಸಂಗವಿಲ್ಲ. ಅಹಂಕಾರಿಗಳು ಮದಾಂಧರು ಶಾಪಹತರು ಜಡಜೀವಿಗಳು ಎಂತರಿಯಬಹುದಯ್ಯಾ. ಶಿವಮಾಹೇಶ್ವರರ ಮಹಿಮೆಯನರಿಯದ ದೋಷಿಗಳ ಕೂಡೆ ಸಂವಾದಿಸಲುಂಟೆ? ಅವರುಗಳ ಮನದನುವರಿತು, ಅರಿವಿನ ಹವಣಿಂದರಿದು, ಅವಾಚಕವಾಗಿಪ್ಪುದಲ್ಲದೆ ಆ ಪಾಪಿಗಳ ನೋಡಲಾಗದು. ನುಡಿಸಲಾಗದು, ಸಮಾನದಲ್ಲಿ ಕುಳ್ಳಿರ್ದು ತರ್ಕಿಸಲಾಗದು. ಶಿವಜ್ಞಾನವಿಲ್ಲದವರ ಕೂಡೆ ನುಡಿಯಲು ತೆರಹುಂಟೆ ಶಿವಮಾಹೇಶ್ವರಂಗೆ? [ಅವರು] ಶಿವಲಿಂಗಾರ್ಚನೆಯಂ ಮಾಡಿ ಮಹಾನುಭಾವರ ಸಂಗದಲ್ಲಿ ಅನುಭಾವಸಂಗದಲ್ಲಿಹರಲ್ಲದೆ ಕೇಳಿರಣ್ಣಾ, ದೇವದಾನವ ಮಾನವರ ಪರಿಯಲ್ಲ. ಎಮ್ಮ ಮಾಹೇಶ್ವರರು ಸರ್ವಾಚಾರಸಂಪನ್ನರು ಸರ್ವವಿದ್ಯಾಪರೀಕ್ಷಿತರು, ತಾತ್ಪರ್ಯಕಳಾಗ್ರಾಹಿಗಳು, ವಿಶ್ವಾಧಿಕರು, ಎಮ್ಮ ಮಾಹೇಶ್ವರರು ಪರಧನ ಪರಸ್ತ್ರೀಯನೊಲ್ಲರು, ಸತ್ಯರು ನಿತ್ಯರು ನಿರುಪಾಧಿಕರು, ನಿರಾಶಾಸಂಪೂರ್ಣರು ಪರಿಣಾಮಿಗಳು. ಅವರ ಸಂಗದಿಂದ ಗುರುಸಿದ್ಧಿ ಲಿಂಗಸಿದ್ಧಿ ಜಂಗಮಸಿದ್ಧಿ ಪರಸಿದ್ಧಿ ಪದಸಿದ್ಧಿ ಸರ್ವಸಿದ್ಧಿ ಮಹಾಸಿದ್ಧಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.