ಶ್ರೀಗುರು ಮಾಡಿದ ಗುರುತ್ವ ಉಪಮಾತೀತವು.
ನೇತ್ರದಲ್ಲಿ ತನ್ನ ರೂಪು ತುಂಬಿ ನೇತ್ರವ ಗುರು ಮಾಡಿದನು.
ಶ್ರೋತ್ರದಲ್ಲಿ ಮಹಾಮಂತ್ರವ ತುಂಬಿಶ್ರೋತ್ರವ ಗುರು ಮಾಡಿದನು.
ಘ್ರಾಣದಲ್ಲಿ ಮಹಾಗಂಧವ ತುಂಬಿಘ್ರಾಣವ ಗುರು ಮಾಡಿದನು.
ಜಿಹ್ವೆಯಲ್ಲಿ ಕರುಣಪ್ರಸಾದವ ತುಂಬಿ ಜಿಹ್ವೆಯ ಗುರು ಮಾಡಿದನು.
ಕಾಯವ ಮಹಾಕಾಯವೆನಿಸಿ, ಪ್ರಸಾದಕಾಯವೆನಿಸಿ,
ಕಾಯವ ಗುರು ಮಾಡಿದನು.
ಪ್ರಾಣವನೂ ಲಿಂಗಪ್ರಾಣಸಂಬಂಧವ ಮಾಡಿ
ಪ್ರಾಣವ ಗುರು ಮಾಡಿದನು.
ಇಂತು ಅಂತರಂಗ ಬಹಿರಂಗವನು ಗುರು ಮಾಡಿದನು.
ಸರ್ವಾಂಗವನು ಗುರುವ ಮಾಡಿದ ಗುರುವಿಂಗೆ
ನಾನಿನ್ನೇನ ಮಾಡುವೆನಯ್ಯಾ?
ಗುರುಪೂಜೆಗನುವಾದ ದ್ರವ್ಯಂಗಳನೂ,
ಆವಾವ ಪದಾರ್ಥಂಗಳನೂ
ಆವಾವ ಪುಷ್ಪಫಲಾದಿಗಳನೂ
ವಿಚಾರಿಸಿ ನೋಡಿದಡೆ ಆವುವು ಗುರುತ್ವವಿಲ್ಲ.
ಸರ್ವದ್ರವ್ಯಮೂಲವೂ ಸರ್ವಪದಾರ್ಥಮೂಲವೂ
ಸರ್ವರಸಪುಷ್ಪಫಲಾದಿಗಳಿಗೆ ಎಲ್ಲದಕ್ಕೂ
ಮೂಲಿಗ ಮನವು ಗುರುತ್ವವನ್ನುಳ್ಳದ್ದು.
ತನ್ನ ಮನೋವಾಕ್‍ಸಹಿತ ಕಾಯವನೂ ಸದ್ಗುರುವಿಂಗಿತ್ತು
ಶ್ರೀಗುರು ದರ್ಶನ ಸ್ಪರ್ಶನ ಮಾಡಿ ಸುಖಿಯಪ್ಪೆ ನಾನು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.