Index   ವಚನ - 314    Search  
 
ಶ್ರೀಗುರುಲಿಂಗಜಂಗಮಕ್ಕೆ ತನುಮನಧನವನು ವಂಚನೆಯಿಲ್ಲದೆ ಸದ್ಭಕ್ತಿಯಿಂದ ಅರ್ಪಿಸಿ ದಾಸೋಹಿಯಾದಡೆ ಸದ್ಭಕ್ತನು. ಆ ಸದ್ಭಕ್ತನ `ಭಕ್ತಕಾಯ ಮಮಕಾಯ' ಎಂಬ ಶಿವವಾಕ್ಯದಿಂದ ಅದು ಶಿವನ ತನು. `ಯತೋ ವಾಚೋ ನಿವರ್ತಂತೇ' ಎಂಬ ಲಿಂಗವನು ಶ್ರೀಗುರು ಕಣ್ಗೆ ಗೋಚರವ ಮಾಡಿ ಕರಸ್ಥಳವಲ್ಲಿ ಬಿಜಯಂಗೈಸಿ ಕೊಟ್ಟ ಬಳಿಕ ಲಿಂಗಪ್ರಾಣಿ ಶಿವತನುವಾಯಿತ್ತು. ಶಿವಜ್ಞಾನಸದ್ಭಕ್ತಿಸಂಪೂರ್ಣವಾದಡೆ ಸರ್ವಾಂಗಲಿಂಗ, ಆ ಅಂಗಗುಣವೆಲ್ಲ ಲಿಂಗಗುಣ, ಪಂಚೇಂದ್ರಿಯಂಗಳು ಲಿಂಗೇಂದ್ರಿಯಂಗಳು, ಆ ಮಹಾಸದ್ಭಕ್ತನ ಕ್ರೀ ಲಿಂಗಕ್ರೀ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.