Index   ವಚನ - 317    Search  
 
ಶ್ರೀಗುರುಲಿಂಗದಲ್ಲಿ ಬಸವಣ್ಣನ ಕಂಡೆನು, ಬಸವಣ್ಣನಲ್ಲಿ ಶ್ರೀಗುರುಲಿಂಗವ ಕಂಡೆನು. ಶಿವಲಿಂಗದಲ್ಲಿ ಬಸವಣ್ಣನ ಕಂಡೆನು, ಬಸವಣ್ಣನಲ್ಲಿ ಶಿವಲಿಂಗವ ಕಂಡೆನು. ಜಂಗಮಲಿಂಗದಲ್ಲಿ ಬಸವಣ್ಣನ ಕಂಡೆನು. ಬಸವಣ್ಣನಲ್ಲಿ ಜಂಗಮಲಿಂಗವ ಕಂಡೆನು. ಪ್ರಸಾದದಲ್ಲಿ ಬಸವಣ್ಣನ ಕಂಡೆನು, ಬಸವಣ್ಣನಲ್ಲಿ ಪ್ರಸಾದವ ಕಂಡೆನು. ಈ ಚತುರ್ವಿಧದಲ್ಲಿ ಬಸವಣ್ಣನ ಕಂಡೆನು, ಬಸವಣ್ಣನಲ್ಲಿ ಚತುರ್ವಿಧವ ಕಂಡೆನು. ಇಂತಹ ಮಹಾಮಹಿಮರುಂಟೆ? ಶಿವ ಶಿವಾ, ಮಹಾದೇವ, ಇಂತಹ ಸದ್ಭಕ್ತರುಂಟೆ? ಇದು ಕಾರಣ, ಶ್ರೀಗುರುಲಿಂಗವೂ ಬಸವಣ್ಣನೇ, ಶಿವಲಿಂಗವೂ ಬಸವಣ್ಣನೇ, ಜಂಗಮಲಿಂಗವೂ ಬಸವಣ್ಣನೇ, ಪ್ರಸಾದಲಿಂಗವೂ ಬಸವಣ್ಣನೇ. ಇಷ್ಟಲಿಂಗವೂ ಬಸವಣ್ಣನೇ, ಪ್ರಾಣಲಿಂಗವೂ ಬಸವಣ್ಣನೇ, ಭಾವಲಿಂಗವೂ ಬಸವಣ್ಣನೇ, ಆಚಾರಲಿಂಗವೂ ಬಸವಣ್ಣನೇ, ಮಹಾಲಿಂಗವೂ ಎನಗೆ ಬಸವಣ್ಣನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.