Index   ವಚನ - 319    Search  
 
ಶ್ರೀಗುರುವೇ ಪರಶಿವಲಿಂಗ, ಪರಶಿವಲಿಂಗವೇ ಜಂಗಮ, ಜಂಗಮವೇ ಪರಶಿವಲಿಂಗ. ಗುರು ಲಿಂಗ ಜಂಗಮ ತ್ರಿವಿಧವೂ ಪರಶಿವಲಿಂಗವೆಂದರಿದು ಮನೋವಾಕ್ಕಾಯವನೊಂದು ಮಾಡಿ ತನು ಮನ ಧನವನೊಂದು ಮಾಡಿ ಆ ಒಂದುಮಾಡಿದ ಮನವನೂ, ಆ ತ್ರಿವಿಧವನೊಂದುಮಾಡಿದ ಪರಶಿವಲಿಂಗದಲ್ಲಿ ಅರ್ಪಿಸಲು ಆ ಲಿಂಗಪ್ರಸನ್ನವೇ ಪ್ರಸಾದ, ಆ ಪ್ರಸಾದವೇ ಪರಶಿವಲಿಂಗ. ಇಂತು ಬೀಜ-ವೃಕ್ಷ, ಪುಷ್ಪ-ಫಲ ಒಂದೇ ಬೀಜವೃಕ್ಷಯಥಾನ್ಯಾಯವೆಂದುದಾಗಿ. ಪರಶಿವನು ಭಕ್ತಜನಂಗಳ ರಕ್ಷಿಸಲೋಸುಗ[ರ] ದೇವದಾನವ ಮಾನವರಿಗೆ ಕೃಪೆಮಾಡಿ ದೀಕ್ಷೆಯ ಮಾಡಲೋಸುಗರ, ಬಹುವಿಧದಲ್ಲಿ ಶ್ರೀಗುರುರೂಪಾದನು. ಆದರೆ ಶ್ರೀಗುರು ಒಂದೇ ವಸ್ತು, ಪರಶಿವನು. `ಸ್ಥಾವರಂ ಜಂಗಮಾಧಾರಂ' ಎಂದುದಾಗಿ, ಪರಶಿವನು ಶಕ್ತಿವಿನೋದಕಾರಣ ಸದ್ಭಕ್ತಜನಂಗಳಿಗೆ ಪ್ರಸನ್ನವಾಗಲೋಸುಗರ, ದೇವ ದಾನವ ಮಾನವರಲ್ಲಿ ವಿನೋದಿಸಿ ಉತ್ಪತ್ತಿಸ್ಥಿತಿಲಯವ ಮಾಡಲೋಸುಗರ, ಅನೇಕತತ್ತ್ವರೂಪಾದನು ಸರ್ವತತ್ತ್ವರೂಪು ಪರಶಿವನೊಂದೇ ವಸ್ತು, `ತತ್ತ್ವಂ ವಸ್ತುಕಂ' ಎಂದುದಾಗಿ, `ನಾನಾರೂಪಧರಂ ದೇವಂ' ಎಂದುದಾಗಿ, ಪರಶಿವನೊಂದೇ ವಸ್ತು. ಸರ್ವಲೋಕವ ರಕ್ಷಿಸಲೋಸುಗರ, ತನು ಮನ ಧನವನೂ ತನ್ನಲ್ಲಿಗೆ ತೆಗೆದುಕೊಂಡು ಪಾದೋದಕ ಪ್ರಸಾದವನಿತ್ತು ರಕ್ಷಿಸಲೋಸುಗರ, ನಾನಾರೂಪು ಬಹುವಿಧಶೀಲದಿಂ ಜಂಗಮರೂಪಾದನು. `ದಂಡಕ್ಷೀರದ್ವಯಂ ಹಸ್ತೇ' ಎಂದುದಾಗಿ, ಪರಶಿವನೊಂದೇ ವಸ್ತು. `ಯೇ ರುದ್ರಲೋಕಾದವತೀರ್ಯ ರುದ್ರಾ ಎಂದುದಾಗಿ, ಜಂಗಮ ಪರಶಿವನೂ ಒಂದೇ ವಸ್ತು. ಪರಶಿವನ ಪ್ರಸನ್ನವೇ ಪ್ರಸಾದ, ಗುರುಲಿಂಗಜಂಗಮ ತ್ರಿವಿಧಲಿಂಗದಲ್ಲಿ ತನು ಮನ ಧನವನೂ ಸರ್ವಪದಾರ್ಥ ಸರ್ವದ್ರವ್ಯವನೂ ನೇತ್ರದ ಕೈಯಲೂ ಘ್ರಾಣದ ಕೈಯಲೂ ಜಿಹ್ವೆಯ ಕೈಯಲೂ ಪರುಷಭಾವ ಮನವಾಕ್ಕಿನ ಕೈಯಲೂ ಈ ಪ್ರಕರದಿಂದೆಲ್ಲಾ ತೆರದಲ್ಲಿ ಸಕಲನಿಷ್ಕಲವನೆಲ್ಲವನೂ ಅರ್ಪಿಸಿದಲ್ಲಿ ಆ ಪರಶಿವನು ಅನೇಕ ವಿಧದಲ್ಲಿ, ಅನೇಕ ಮುಖದಲ್ಲಿ, ಅರ್ಪಿತವ ಕೈಕೊಂಡು ಪ್ರಸನ್ನವಾಗಲು, ಸದ್ಬಕ್ತಂಗೆ ಬಹುವಿಧ: ಗುರುಮುಖದಲ್ಲಿ ಶುದ್ಧಪ್ರಸಾದ, ಲಿಂಗಮುಖದಲ್ಲಿ ಸಿದ್ಧಪ್ರಸಾದ, ಜಂಗಮಮುಖದಲ್ಲಿ ಪ್ರಸಿದ್ಧಪ್ರಸಾದ. ಗುರುಮುಖದಲ್ಲಿ ನೇತ್ರ ಪ್ರಸಾದ, ಶ್ರೋತ್ರ ಪ್ರಸಾದ, ಘ್ರಾಣ ಪ್ರಸಾದ, ಜಿಹ್ವೆ ಪ್ರಸಾದ, ಪರುಶನ ಪ್ರಸಾದ, ಭಾವ ಪ್ರಸಾದ, ಮನ ಪ್ರಸಾದ, ವಾಕ್ ಪ್ರಸಾದ, ಕಾಯ ಪ್ರಸಾದ ಇವುವಿಡಿದು ನಡೆವುವು ತ್ರಿವಿಧಸಂಪತ್ತುಗಳು. ಭಕ್ತ ಮಹೇಶ್ವರ ಪ್ರಸಾದಿ ಮನವಿಡಿದು ನಡೆವುವು ತ್ರಿವಿಧಸಂಪತ್ತುಗಳು. ಪ್ರಾಣಲಿಂಗಿ ಶರಣನೈಕ್ಯವಾಗಿ ನಡೆದರಯ್ಯಾ ಕ್ರಿಯಾನುಭಾವವಿಡಿದು. ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ| ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್|| ಈ ಭೇದವನು ಭೇದಿಸಬಲ್ಲಡೆ ಇಂದೇ ಇಹವಿಲ್ಲ ಪರವಿಲ್ಲ. ಈ ಒಂದೇ ನಾನಾವಿಧಪ್ರಸಾದ ಅನೇಕದಿನದಿಂ ಪ್ರಸನ್ನನಾಗಲು ಪ್ರಸಾದ ಒಂದೇ ವಸ್ತು ಪರಶಿವನು. ಇದು ಕಾರಣ, ಶ್ರೀಗುರು ಪರಶಿವನು ಜಂಗಮವು ಪ್ರಸಾದವು ಒಂದೇ ಕಾಣಿರಣ್ಣಾ. ಈ ಚತುಷ್ಟವನು ವೇದ ಶಾಸ್ತ್ರ ಆಗಮ ಪುರಾಣದಿಂ ವಿಚಾರಿಸಲು ಒಂದೇ ವಸ್ತು. ಆ ವಿಚಾರವ ನಂಬದೇ ಕೆಡಬೇಡ. ಜಂಗಮವೆಯಿದು `ಸ ಭಗವಾನ್ ಯಸ್ಯ ಸರ್ವೇ' ಎಂದುದಾಗಿ `ಸರ್ವಕಾರಣಕಾರಣಾತ್' ಎಂದು ಪರಶಿವಲಿಂಗವಲ್ಲದೆ ಇಲ್ಲ. ಆತನ ಪ್ರಸನ್ನವೇ ಪ್ರಸಾದ, ಆ ಪ್ರಸಾದವೇ ಮುಕ್ತಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.