Index   ವಚನ - 321    Search  
 
ಶ್ರೀಮತ್ಪಂಚಾಕ್ಷರಿಯ ಉಚ್ಚರಣದ ವಿಶ್ವಾಸದಿಂದ ಉಪಮನ್ಯುವಿಂಗೆ ಶಿವಜ್ಞಾನ ಸಿದ್ಧಿಸಿತ್ತು. ಶ್ರೀಮತ್ಪಂಚಾಕ್ಷರಿಯ ಉಚ್ಚರಣದ ವಿಶ್ವಾಸದ ಸಾಧನದಿಂದ ವಸಿಷ್ಠ, ವಾಮದೇವ ಮೊದಲಾದ ಸಮಸ್ತಋಷಿಗಳಿಗೆ ಹಿರಿದಪ್ಪ ಪಾಪದೋಷವು ಹರಿದಿತ್ತು. ಶ್ರೀಮತ್ಪಂಚಾಕ್ಷರಿಯ ಉಚ್ಚರಣದ ವಿಶ್ವಾಸದ ಸಾಧನದಿಂದ ಬ್ರಹ್ಮವಿಷ್ಣ್ವಾದಿಗಳಿಗೆ ಜಗತ್ಸೃಷ್ಟಿರಕ್ಷಾಪತಿತ್ವ ಸಾಧ್ಯವಾಯಿತ್ತು. ಅದೆಂತೆಂದಡೆ:ಬ್ರಹ್ಮಾಂಡಪುರಾಣದಲ್ಲಿ, ಉಪಮನ್ಯುಃ ಪುರಾ ಯೋಗೀ ಮಂತ್ರೇಣಾನೇನ ಸಿದ್ಧಿಮಾನ್ ಲಬ್ಧವಾನ್ಪರಮೇಶತ್ವಂ ಶೈವಶಾಸ್ತ್ರ ಪ್ರವಕ್ತೃತಾಂ ಮತ್ತಂ, ವಿಷ್ಣುಪುರಾಣದಲ್ಲಿ, ವಸಿಷ್ಠವಾಮದೇವಾದ್ಯಾ ಮುನಯೋ ಮುಕ್ತಕಿಲ್ಬಿಷಾಃ ಮಂತ್ರೇಣಾನೇನ ಸಂಸಿದ್ಧಾ ಮಹಾತೇಜಸ್ವಿನೋ[s]ಭವನ್ ಎಂದುದಾಗಿ, ಮತ್ತಂ ಕೂರ್ಮಪುರಾಣದಲ್ಲಿ, ಬ್ರಹ್ಮಾದೀನಾಂ ಚ ದೇವಾನಾಂ ಜಗತ್ಸೃಷ್ಟ್ಯರ್ಥಕಾರಣಂ ಮಂತ್ರಸ್ಯಾಸ್ಯೈವ ಮಹಾತ್ಮ್ಯಾತ್ಸಾಮರ್ಥ್ಯಮುಪಜಾಯತೇ ಎಂದುದಾಗಿ, ಇಂತಪ್ಪ ಪುರಾಣವಾಕ್ಯಂಗಳನರಿದು ವಿಪ್ರರೆಲ್ಲರು ಶ್ರೀ ಪಂಚಾಕ್ಷರಿಯ ಜಪಿಸಿರೋ, ಜಪಿಸಿರೋ. ಮಂತ್ರಂಗಳುಂಟೆಂದು ಕೆಡಬೇಡಿ ಕೆಡಬೇಡಿ. ಮರೆಯದಿರಿ, ಮಹತ್ತಪ್ಪ ಪದವಿಯ ಪಡೆವಡೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರದೇವರ ದಿವ್ಯನಾಮವನು.