Index   ವಚನ - 28    Search  
 
ಅದ್ವೈತವನೋದಿ ಎರಡಳಿದೆವೆಂಬ ಅಣ್ಣಗಳು ನೀವು ಕೇಳಿರೆ. ಅದ್ವೈತಿಯಾದಡೆ ತನುವಿಕಾರ, ಮನದ ಸಂಚಲ, ಭಾವದ ಭ್ರಾಂತು, ಅರಿವಿನ ಮರಹು, ಇಂತೀ ಚತುರ್ವಿಧಂಗಳಲ್ಲಿ ವಿಧಿನಿಷೇಧಂಗಳಳಿದು, ಚಿದ್ಬ್ರಹ್ಮದೊಳವಿರಳಾತ್ಮಕವಾದುದು ಅದ್ವೈತ. ಅಂತಪ್ಪ ವಿಧಿನಿಷೇಧಂಗಳು ಹಿಂಗದೆ, ಲಿಂಗವನರಿಯದೆ, ವಾಗದ್ವೈತದಿಂದ ನುಡಿದು ಅದ್ವೈತಿ ಎನಿಸಿಕೊಂಬುದೆ ದ್ವೈತ. ಇಂತಪ್ಪ ದ್ವೈತಾದ್ವೈತಂಗಳಿಗೆ ಸಿಲುಕದ, ಹರಿಹರಬ್ರರ್ಹದಿಗಳನರಿಯದ ವೇದಶಾಸ್ತ್ರ ಆಗದು ಪುರಾಣ ಇತಿಹಾಸ ರಹಸ್ಯಛಂದಸ್ಸು ಅಲಂಕಾರ ನಿಘಂಟು ಶಬ್ದತರ್ಕಂಗಳೆಂಬ ಕುತರ್ಕಂಗಳಿಗೆ ನಿಲುಕದ ನಿತ್ಯನಿಜೈಕ್ಯ ನಿರುಪಮಸುಖಿಯಾಗಿ, ತಾನಿದಿರೆಂಬ ಭಿನ್ನಭಾವವಿಲ್ಲದ ಸ್ವಯಾದ್ವೈತಿ ತಾನೆ ಸೌರಾಷ್ಟ್ರ ಸೋಮೇಶ್ವರ.