ಅಡ್ಡಬಿದ್ದ ಶಿಷ್ಯನ ಮಾಡಿಕೊಂಬ
ದಡ್ಡ ಪ್ರಾಣಿಗಳನೇನೆಂಬೆನಯ್ಯ.
ಏನೇನೂ ಅರಿಯದ ಎಡ್ಡ ಮಾನವರಿಗೆ
ಉಪದೇಶವ ಮಾಡುವ
ಗೊಡ್ಡ ಮಾನವನ ಮುಖವ ತೋರದಿರಯ್ಯಾ.
ಅದೇನು ಕಾರಣವೆಂದಡೆ:
ಆ ಮೂಢಜೀವಿಯ ಪ್ರಪಂಚವ ಕಳೆಯಲಿಲ್ಲ.
ಅವನ ಪಂಚೇಂದ್ರಿಯಂಗಳು, ಸಪ್ತವ್ಯಸನಂಗಳು, ಅಷ್ಟಮದಂಗಳೆಂಬ
ಖೊಟ್ಟಿ ಗುಣಂಗಳ ಬಿಡಿಸಲಿಲ್ಲ.
ಸೂತಕ ಪಾತಕಂಗಳ ಕೆಡಿಸಿ, ಮೂರು ಮಲಂಗಳ ಬಿಡಿಸಿ
ಮುಕ್ತಿಪಥವನರುಹಲಿಲ್ಲ.
ಮಹಾಶೂನ್ಯ ನಿರಾಳ ನಿರಂಜನಲಿಂಗವ
ಕರ-ಮನ-ಭಾವ ಸರ್ವಾಂಗದಲ್ಲಿ ತುಂಬಿ ನಿತ್ಯನೆಂದೆನಿಸಲಿಲ್ಲ.
ಇದನರಿಯದ ವ್ಯರ್ಥಕಾಯರುಗಳ ಗುರುವೆಂದಡೆ ಪ್ರಮಥರು ಮೆಚ್ಚುವರೆ?
ಇಂತಪ್ಪ ಗುರು ಶಿಷ್ಯರೀರ್ವರು ಅಜ್ಞಾನಿಗಳು.
ಅವರು ಇಹಲೋಕ ಪರಲೋಕಕ್ಕೆ ಹೊರಗೆಂದಾತನಂಬಿಗರ ಚೌಡಯ್ಯ.
Art
Manuscript
Music
Courtesy:
Transliteration
Aḍḍabidda śiṣyana māḍikomba
daḍḍa prāṇigaḷanēnembenayya.
Ēnēnū ariyada eḍḍa mānavarige
upadēśava māḍuva
goḍḍa mānavana mukhava tōradirayyā.
Adēnu kāraṇavendaḍe:
Ā mūḍhajīviya prapan̄cava kaḷeyalilla.Avana pan̄cēndriyaṅgaḷu, saptavyasanaṅgaḷu, aṣṭamadaṅgaḷemba
khoṭṭi guṇaṅgaḷa biḍisalilla.
Sūtaka pātakaṅgaḷa keḍisi, mūru malaṅgaḷa biḍisi
muktipathavanaruhalilla.
Mahāśūn'ya nirāḷa niran̄janaliṅgava
kara-mana-bhāva sarvāṅgadalli tumbi nityanendenisalilla.
Idanariyada vyarthakāyarugaḷa guruvendaḍe pramatharu meccuvare?
Intappa guru śiṣyarīrvaru ajñānigaḷu.
Avaru ihalōka paralōkakke horagendātanambigara cauḍayya.