ಈರೇಳು ಭುವನವನೊಳಕೊಂಡ ಮಹಾಘನಲಿಂಗವು
ಶಿವಭಕ್ತನ ಕರಸ್ಥಲದಾಲಯಕ್ಕೆ ಬಂದು,
ಪೂಜೆಗೊಂಬ ಪರಿಯ ನೋಡ!
ಅಪ್ರಮಾಣ-ಅಗೋಚರವಾದ ಲಿಂಗದಲ್ಲಿ
ಸಂಗವ ಬಲ್ಲಾತನೆ ಸದಾಚಾರಸದ್ಭಕ್ತನು!
ಹೀಂಗಲ್ಲದೆ ಹಣವಿನಾಸೆಗೆ ಹಂಗಿಗನಾಗಿ,
ಜಿಹ್ವಾಲಂಪಟಕ್ಕೆ ಅನಾಚಾರದಲ್ಲಿ ಉದರವ ಹೊರದು ಬದುಕುವಂಥ
ಭಂಡರು ಭಕ್ತರಾದವರುಂಟೆ? ಹೇಳ!
ಅಂಥ ಅನಾಚಾರಿ ಶಿವದ್ರೋಹಿಗಳ ಮುಖವ ನೋಡಲಾಗದು!
ಅದೆಂತೆಂದಡೆ:
ಕತ್ತೆ ಭಕ್ತನಾದಡೆ ಕಿಸುಕಳವ ತಿಂಬುದ ಮಾಣ್ಬುದೆ?
ಹಂದಿ ಭಕ್ತನಾದಡೆ ಹಡಿಕೆಯ ತಿಂಬುದ ಮಾಣ್ಬುದೆ?
ಬೆಕ್ಕು ಭಕ್ತನಾದಡೆ ಇಲಿಯ ತಿಂಬುದ ಮಾಣ್ಬುದೆ?
ಸುನಕಗೆ ಪಂಚಾಮೃತವ ನೀಡಲು ಅಡಗ ತಿಂಬುದ ಮಾಣ್ಬುದೆ?
ಇಂತೀ ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ
ಮರಳಿ ತನ್ನ ಜಾತಿಯ ಕೂಡಿದಡೆ
ಆ ಕತ್ತೆ-ಹಂದಿ-ಬೆಕ್ಕು-ಸುನಕಗಿಂದತ್ತತ್ತ ಕಡೆ ಕಾಣಿರೊ!
ಹೊನ್ನಬೆಟ್ಟವನೇರಿ ಕಣ್ಣುಕಾಣದಿಪ್ಪಂತೆ,
ಗಣಿಯನೇರಿದ ಡೊಂಬ ಮೈಮರದಿಪ್ಪಂತೆ,
ಅಂಕವನೇರಿದ ಬಂಟ ಕೈಮರದಿಪ್ಪಂತೆ! ಇಂತಿವರು ಮಾಡುವ ಭಕ್ತಿಯೆಲ್ಲವು
ನಡುನೀರೊಳು ಹೋಗುವ ಹರುಗೋಲು
ಹೊಡಗೆಡದಂತಾಯಿತ್ತೆಂದಾತನಂಬಿಗರ ಚೌಡಯ್ಯನು!
Art
Manuscript
Music
Courtesy:
Transliteration
Īrēḷu bhuvanavanoḷakoṇḍa mahāghanaliṅgavu
śivabhaktana karasthaladālayakke bandu,
pūjegomba pariya nōḍa!
Apramāṇa-agōcaravāda liṅgadalli
saṅgava ballātane sadācārasadbhaktanu!
Hīṅgallade haṇavināsege haṅgiganāgi,
jihvālampaṭakke anācāradalli udarava horadu badukuvantha
bhaṇḍaru bhaktarādavaruṇṭe? Hēḷa!
Antha anācāri śivadrōhigaḷa mukhava nōḍalāgadu!
Adentendaḍe:
Katte bhaktanādaḍe kisukaḷava timbuda māṇbude?
Handi bhaktanādaḍe haḍikeya timbuda māṇbude?
Bekku bhaktanādaḍe iliya timbuda māṇbude?
Sunakage pan̄cāmr̥tava nīḍalu aḍaga timbuda māṇbude?
Intī aṅgada mēle liṅgasāhityavāda baḷika
maraḷi tanna jātiya kūḍidaḍe
ā katte-handi-bekku-sunakagindattatta kaḍe kāṇiro!
Honnabeṭṭavanēri kaṇṇukāṇadippante,Gaṇiyanērida ḍomba maimaradippante,
aṅkavanērida baṇṭa kaimaradippante! Intivaru māḍuva bhaktiyellavu
naḍunīroḷu hōguva harugōlu
hoḍageḍadantāyittendātanambigara cauḍayyanu!