ಕತ್ತೆಯ ಮೇಲೆ ತಿತ್ತಿಯ ಮಾಡಿ ಕಳ್ಳು ಹೇರುವರು,
ಅದಕ್ಕದು ಸತ್ಯವಯ್ಯ.
ಎತ್ತಿನ ಮೇಲೆ ತಿತ್ತಿಯ ಮಾಡಿ ತೈಲ ತುಪ್ಪವ ಹೇರುವರು,
ಅದಕ್ಕದು ಸತ್ಯವಯ್ಯ. ಆ ತಿತ್ತಿಯ ಒಳಗಣ ತೈಲ ತುಪ್ಪವ ತಂದು,
ನಿತ್ಯ ಗುರು-ಲಿಂಗ-ಜಂಗಮಕ್ಕೆ ನೀಡುವ
ಭಕ್ತನ ಭಕ್ತಿ ಎಂತಾಯಿತ್ತೆಂದಡೆ:
ಆ ಕತ್ತೆಯ ಮೇಲೆ ಹೇರುವ ಕಳ್ಳುಗುಂಡಿಗಿಂದ
ಕಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ.