ಕಷ್ಟಜೀವನ ಮನುಜರಿರಾ,
ನೀವು ಹುಟ್ಟಿದ ಮೊದಲು,
ಎಷ್ಟು ಮಂದಿ ನಿಮ್ಮ ಕಣ್ಣ ಮುಂದೆ
ನಷ್ಟವಾಗಿ ಹೋದುದ ಕಂಡು ಕಂಡೂ
ಹೆಂಡಿರು ತನ್ನವರೆಂ[ಬಿರೆ]?
ಮಿಂಡಿಯಾಗಿ ಹಲವರ ಬಯಸುವವಳ
ಮಕ್ಕಳ ತನ್ನವರೆಂ[ಬಿರೆ]?
ಕೂಡುವಾಗ ದುಃಖ,
ಕೂಡಿದ ಒಡವೆಯ ಮಡಗುವಾಗ ದುಃಖ,
ಮಡಗಿದ ಒಡವೆಯ ತೆಗೆವಾಗ ದುಃಖ,
ಪ್ರಾಣವ ಬಿಡುವಾಗ ದುಃಖ,
ಹೊಲೆ ಸಂಸಾರವ ನಚ್ಚಿ ಕಾಲನ ಬಲೆಗೆ ಈಡಾ[ಗ]ದಿರೊ,
ಪತಿಭಕ್ತಿ, ಮುಕ್ತಿಯೆಂಬುದ ಗಳಿಸಿಕೊಳ್ಳಿರೊ,
ಸಟೆಯಂ ಬಿಡಿ, ದಿಟವಂ ಹಿಡಿ,
ಘಟವುಳ್ಳ ಕಾಲದಲ್ಲಿ ಶಿವಭಕ್ತಿಯ ನಟಿಸಿ ನಡೆ,
ಎಂದಾತ ನಮ್ಮ ಅಂಬಿಗರ ಚೌಡಯ್ಯ.