Index   ವಚನ - 132    Search  
 
ಜನನ ಸೂತಕ ಮರಣ ಸೂತಕಂಗಳ ಕಳೆದು ಶುದ್ಧವಾದೆನೆಂಬ ಅಜ್ಞಾನಿ ಜಡಜೀವಿಗಳು ನೀವು ಕೇಳಿರೋ! ಪೃಥ್ವಿ ಶುದ್ಧವೆಂಬಿರಿ, ಇಪ್ಪತ್ತೊಂದು ಲಕ್ಷ ಜೀವರಾಶಿಗಳು ಅಲ್ಲಿಯೇ ಹುಟ್ಟಿ, ಅಲ್ಲಿಯೇ ಹೊಂದಿದವಾಗಿ ಅಪ್ಪು ಶುದ್ಧವಲ್ಲ. ಅಗ್ನಿ ಶುದ್ಧವೆಂಬಿರಿ, ಇಪ್ಪತ್ತೊಂದು ಲಕ್ಷ ಜೀವರಾಶಿಗಳು ಅಲ್ಲಿಯೇ ಹುಟ್ಟಿ, ಅಲ್ಲಿಯೇ ಹೊಂದಿದವಾಗಿ ಅಗ್ನಿ ಶುದ್ಧವಲ್ಲ. ಅಪ್ಪು ಶುದ್ಧವೆಂಬಿರಿ, ಇಪ್ಪತ್ತೊಂದು ಲಕ್ಷ ಜೀವರಾಶಿಗಳು ಅಲ್ಲಿಯೇ ಹುಟ್ಟಿ, ಅಲ್ಲಿಯೇ ಹೊಂದಿದವಾಗಿ ಪೃಥ್ವಿ ಶುದ್ಧವಲ್ಲ. ಅಪ್ಪು ಶುದ್ಧವೆಂಬರಿ, ಇಪ್ಪತ್ತೊಂದು ಲಕ್ಷ ಜೀವರಾಶಿಗಳು ಅಲ್ಲಿಯೇ ಹುಟ್ಟಿ, ಅಲ್ಲಿಯೇ ಹೊಂದಿದವಾಗಿ ವಾಯು ಶುದ್ಧವಲ್ಲ. ಆಕಾಶ ಶುದ್ಧವೆಂಬಿರಿ, ಈ ಚತುರ್ವಿಧ ತತ್ವಂಗಳ ಒಳಗಿಟ್ಟುಕೊಂಡು ಈ ಪ್ರಕಾರವಾದ ಕಾರಣ ಆಕಾಶ ಶುದ್ಧವಲ್ಲ. ಇವು ಶುದ್ಧವಹ ಪರಿ ಎಂತೆಂದೊಡೆ: ಈ ಪಂಚತತ್ವಂಗಳು ಹುಟ್ಟಿದವು ನಮ್ಮ ಸದಾಶಿವನ ಸಿರಿಯಪ್ಪದೊಂದು ಇಷ್ಟಲಿಂಗದಲ್ಲಿ. ಆ ಲಿಂಗಕ್ಕೆ ಅಷ್ಟವಿಧಾರ್ಚನೆಯ ಮಾಡಿ ಸರ್ವ ರುಚಿಪದಾರ್ಥವನು ತಂದು ಆ ಲಿಂಗಕ್ಕೆ ಕೊಟ್ಟಲ್ಲಿ, ಲಿಂಗಪ್ರಸಾದವದು ಅಂಗಕ್ಕೆ ಲೇಸಾಗಲೆಂದು, ಕೊಂಬಾತನ ಸರ್ವಾಂಗವೆಲ್ಲ ಶುದ್ಧವಯ್ಯಾ. ಆತನಿಪ್ಪ ಗೃಹವೇ ಪುಣ್ಯಕ್ಷೇತ್ರವು, ಅಂತಹವರ ಪಾದಕ್ಕೆ ಶರಣಾರ್ಥಿ. ಈ ವಿವರವನರಿಯದೆ ತನ್ನ ಕರದ ಲಿಂಗಕ್ಕೆ ಅಷ್ಟವಿಧಾರ್ಚನೆಯ ಮಾಡದೆ, ಭೋಜನ ಪದಾರ್ಥ ನೀರು ರೊಟ್ಟಿ ಮುಟ್ಟಿಗೆ ಗುಗ್ಗರಿ ಸೀತೆನಿ ಬೆಳಸಿ ಕಾಯಿ ಕಸಿಕು ಹಣ್ಣು ಹಂಪಲ ಹಾಲು ಮೊಸರು ಮಜ್ಜಿಗೆ ತುಪ್ಪ ಸಕ್ಕರೆ ಹೋಳು ವೀಳೆಯ -ಇವನೆಲ್ಲವನು ತನ್ನ ಲಿಂಗಕ್ಕೆ ಕೊಡದೆ, ಅಂಗಕ್ಕೆ ಲೇಸಾಗಲೆಂದು ತಿಂಬುವನು ಅವನೀಗ ತಾನೇ ಶುದ್ಧ ಹೊಲೆಯನೆಂದಾತ ನಮ್ಮ ಅಂಬಿಗರ ಚೌಡಯ್ಯ.