ಬೆಟ್ಟದ ಲಿಂಗವ ಹಿರಿದುಮಾಡಿ,
ತನ್ನ ಇಷ್ಟಲಿಂಗವ ಕಿರಿದುಮಾಡುವ ಮೂಳಹೊಲೆಯರಿರಾ,
ಅಣುರೇಣುತೃಣಕಾಷ್ಠ ಮೊದಲಾದ
ಬ್ರಹ್ಮಾಂಡ ಪರಿಪೂರ್ಣವಾದ
ಮಹಾಲಿಂಗವೆ ಅಂಗಕ್ಕೆ ಗುರುವು ಎಂದು ಸಂಬಂಧಿಸಿ
ಸರ್ವಸಂ[ಕು]ಲವ ತೋರಿದ ಬಳಿಕ,
ಇಂತಪ್ಪ ಮೋಕ್ಷಕ್ಕೆ ಕಾರಣವಾದ ಲಿಂಗವನು ಅಡಿಮಾಡಿ
ನಟ್ಟ ಕಲ್ಲಿಂಗೆ ಅಡ್ಡಬೀಳುವ
ಹೊಲೆಯರಿಗೆ ಲಿಂಗ ಕಟ್ಟುವುದು ಕಿರಿದು,
ಗೊಡ್ಡೆಮ್ಮೆಗೆ ಲಿಂಗವದು ಕರ ಲೇಸು.
ಇಂಥ ಮೂಳ ಹೊಲೆಯರು ಶಿವಭಕ್ತರೆಂದು ನುಡಿವ ಭ್ರಷ್ಟರನು
ಕತ್ತೆಯನೇರಿಸಿ ಕೆರಹಿನಟ್ಟೆಯಲಿ ಹೊಡೆಯೆಂದಾತ
ನಮ್ಮ ಅಂಬಿಗರ ಚೌಡಯ್ಯನೆಂಬ ನಿಜಶರಣನು.