Index   ವಚನ - 213    Search  
 
ಮಹಾಘನಲಿಂಗದ ನಿಜಘನವೆಂಬ ಚಿದ್ಘನಾತ್ಮಕ ಶರಣನ ಲೀಲೆಯಿಂದ ಮಹಾಜ್ಯೋತಿ ಹುಟ್ಟಿತ್ತು, ಆ ಜ್ಯೋತಿಯ ಬೆಳಗಿನಲ್ಲಿ ಅರಿವು ಮರವೆಂಬ ಭೂತಾತ್ಮ ಮಹಾತ್ಮಂಗಳು ಹುಟ್ಟಿದವು. ಆತ್ಮಂಗಳಿಂದ ಜ್ಞಾನಾತ್ಮ, ಶುದ್ಧಾತ್ಮ, ನಿರ್ಮಲಾತ್ಮ, ಪರಮಾತ್ಮ, ಅಂತರಾತ್ಮ, ಜೀವಾತ್ಮಂಗಳು ಹುಟ್ಟಿದವು. ಆ ಜ್ಞಾನಾತ್ಮನಲ್ಲಿ ಮಹಾನುಭಾವಜ್ಞಾನಂಗಳು ಹುಟ್ಟಿ ತ್ರಿಯಕ್ಷರಾದವು. ಆ ತ್ರಿಯಕ್ಷರಂಗಳಲ್ಲಿ ಓಂಕಾರ ಹುಟ್ಟಿತ್ತು. ಆ ಓಂಕಾರದಲ್ಲಿ ಪಂಚಾಕ್ಷರಂಗಳು ಹುಟ್ಟಿದವು. ಆ ಪಂಚಾಕ್ಷರಂಗಳಲ್ಲಿ ಐವತ್ತೆರಡು ಅಕ್ಷರಂಗಳು ಹುಟ್ಟಿದವು. ಇಂತೀ ಅಕ್ಷರಂಗಳೆಲ್ಲವನು ಷಡಾತ್ಮಕರ ಪ್ರಾಣವೆಂದಾತ ನಮ್ಮ ಅಂಬಿಗರ ಚೌಡಯ್ಯ.