Index   ವಚನ - 237    Search  
 
ವೀರಂಗೆ ರಣಾಗ್ರದ ಕದನ ಭೋರೆಂದು ಕಟ್ಟಿದಲ್ಲಿ ದೂರದಲ್ಲಿರ್ದೆಸೆವನೊಂದಂಬಿನಲ್ಲಿ. ಸೇರಿಬಂದರೆ ಹೊಯಿವ ಬಿಲ್ಲಿನಲ್ಲಿ. ಅವು ಮೀರಿ ಬಂದಲಿ ಇರಿವ ಕಠಾರಿಯಲ್ಲಿ. ಅದು ತಪ್ಪಿದಲ್ಲಿ ತೆಕ್ಕೆಯಲ್ಲಿ ಪಿಡಿವ, ಯುದ್ಧದಲ್ಲಿ ಬಿದ್ದಲ್ಲಿ ಕಡಿವ ಬಾಯಲ್ಲಿ. ಇಂತಿ ಅವರ ಪ್ರಾಣಕ್ಕೆ ಬಂದಲ್ಲಿ ಅವ ತನ್ನ ಧೈರ್ಯ, ವ್ರತವರತುದಿಲ್ಲ. ಹೀಂಗಿರಲಿಲ್ಲವೆ ಸದ್ಭಕ್ತನ ಗುಣ? ಹೊನ್ನು ಹೆಣ್ಣು ಮಣ್ಣುಳ್ಳ ಕಾಲದಲ್ಲಿಯೇ ಪನ್ನಗಧರನ ಶರಣರಿಗೆ ಅನ್ನೋದಕ ವಸ್ತ್ರಂಗಳಿಂದುಪಚಾರವ ಮಾಡುವುದು. ಅದು ಖಂಡಿತವಾದರೆ ನೀಡಿ ಮಾಡುವ ಭಕ್ತರ ಮಠದ ಒಡಗೊಂಡು ಹೋಗಿ ತೋರುವುದು ಅದಕ್ಕಾಗದಿರ್ದಡೆ ಹರಶರಣರ ಕಮಂಡಲ ಕೊಂಡುಹೋಗಿ ಮಡುವಿನಲ್ಲಿ ಅಗ್ಘವಣಿಯ ತಂದು, ಪಾದವ ತೊಳುವುದು. ಅದಕ್ಕಾಗದಿರ್ದಡೆ ಶಿವಶರಣ ಕಂಡು, ಇದಿರೆದ್ದು ನಮಸ್ಕರಿಸುವುದು. ಇಷ್ಟರೊಳಗೊಂದು ಗುಣವಿಲ್ಲದಿರ್ದರೆ ಅವ ಭಕ್ತನಲ್ಲ, ಅವ ಹೊಲೆಯನೆಂದಾತ ನಮ್ಮ ಅಂಬಿಗರ ಚೌಡಯ್ಯ.