ಶೀಲವಂತರು ಶೀಲವಂತರು ಎಂದು ಶೀಲದಲ್ಲಿ ಆಚರಿಸುವ
ಅಣ್ಣಗ[ಳೇ] ನಿಮ್ಮ ಶೀಲವಾವುದು ಹೇಳಿರೋ,
ಅರಿಯದಿದ್ದರೆ ಕೇಳಿರೋ:
ಶಿರಸ್ಸಿನಲ್ಲಿ ಶಿವನಿಪ್ಪ, ಕಟಿಯಲ್ಲಿ ವಿಷ್ಣುವಿಪ್ಪ,
ಆಧಾರದಲ್ಲಿ ಬ್ರಹ್ಮನಿಪ್ಪ,
ಲಲಾಟದಲ್ಲಿ ವಿಭೂತಿರುದ್ರಾಕ್ಷಿ,
ಜಿಹ್ವೆಯಲ್ಲಿ ಪಂಚಾಕ್ಷರಿಯು.
ಇಂತಪ್ಪ ಅಷ್ಟಾವರಣದಲ್ಲಿ ಸವೆಯದೆ,
ಸಂಸಾರವೆಂಬ ಶರಧಿಯಲ್ಲಿ ಮುಳುಗೇಳುವರು ಶೀಲವಂತರಲ್ಲ.
ಬರಿದೆ ನಾವು ಶೀಲವಂತರೆಂಬುವ ಮನುಜ ಕೇಳು:
ಕಣ್ಣೇ ಕಂಚುಗಾರ, ಕರ್ಣವೇ ಬಣಜಿಗ, ಮೂಗೇ ಈಳಿಗ,
ಕೊರಳೇ ಕುಂಬಾರ, ತುಟಿಯೇ ಹೆಂಡಗಾರ, ಹಲ್ಲೆ ಕಲ್ಲುಕುಟಿಗ,
ತಲೆಯೇ ಮೋಪುಗಾರ, ಬೆನ್ನೇ ಜೇಡ, ಅಂಗೈಯೇ ಅಕ್ಕಸಾಲಿಗ,
ಮುಂಗೈಯೇ ಬಡಿಗ, ಕರವೇ ಕೋಮಟಿಗ,
ಕಣಕಾಲೇ ಕಾಳಿಂಗ, ಕುಂಡಿಯೇ ಕುಡುವೊಕ್ಕಲಿಗ,
ಒಳದೊಡೆಯೇ ಸಮಗಾರ, ಹೊರದೊಡೆಯೇ ಮಚ್ಚಿಗ,
ಮೇಗಾಡಿ ಹೊಲೆಯ, ಬುದ್ಧಿಯೇ ಬಯಲಗಂಬಾರ.
-ಇಂತಪ್ಪ ಕುಲ ಹದಿನೆಂಟು ಜಾತಿ
ಎಲು ಮಾಂಸವನು ತುಂಬಿಟ್ಟುಕೊಂಡು
ನನ್ನ ಕುಲ ಹೆಚ್ಚು, ನಿನ್ನ ಕುಲ ಕಡಿಮೆ ಎಂದು
ಹೊಡೆದಾಡುವಂತಹ ಅಣ್ಣಗಳನ್ನು ಹಿಡಿತಂದು
ಮೂಗನೆ ಸವರಿ ಮೆಣಸಿನ ಹಿಟ್ಟು ತುಪ್ಪವ ತುಂಬಿ
ನಮ್ಮ ಪಡಿಹಾರಿ ಉತ್ತಣ್ಣನ ವಾಮಪಾದುಕೆಯಿಂದ
ಪಡಪಡನೆ ಹೊಡಿ ಎಂದಾತ,
ನಮ್ಮಅಂಬಿಗರ ಚೌಡಯ್ಯ ನಿಜಶರಣನು.
Art
Manuscript
Music
Courtesy:
Transliteration
Śīlavantaru śīlavantaru endu śīladalli ācarisuva
aṇṇaga[ḷē] nim'ma śīlavāvudu hēḷirō,
ariyadiddare kēḷirō:
Śiras'sinalli śivanippa, kaṭiyalli viṣṇuvippa,
ādhāradalli brahmanippa,
lalāṭadalli vibhūtirudrākṣi,
jihveyalli pan̄cākṣariyu.
Intappa aṣṭāvaraṇadalli saveyade,
sansāravemba śaradhiyalli muḷugēḷuvaru śīlavantaralla.
Baride nāvu śīlavantarembuva manuja kēḷu:
Kaṇṇē kan̄cugāra, karṇavē baṇajiga, mūgē īḷiga,
koraḷē kumbāra, tuṭiyē heṇḍagāra, halle kallukuṭiga,
taleyē mōpugāra, bennē jēḍa, aṅgaiyē akkasāliga,
Muṅgaiyē baḍiga, karavē kōmaṭiga,
kaṇakālē kāḷiṅga, kuṇḍiyē kuḍuvokkaliga,
oḷadoḍeyē samagāra, horadoḍeyē macciga,
mēgāḍi holeya, bud'dhiyē bayalagambāra.
-Intappa kula hadineṇṭu jāti
elu mānsavanu tumbiṭṭukoṇḍu
nanna kula heccu, ninna kula kaḍime endu
hoḍedāḍuvantaha aṇṇagaḷannu hiḍitandu
mūgane savari meṇasina hiṭṭu tuppava tumbi
nam'ma paḍ'̔ihāri uttaṇṇana vāmapādukeyinda
paḍapaḍane hoḍi endāta,
nam'ma'ambigara cauḍayya nijaśaraṇanu.