Index   ವಚನ - 268    Search  
 
ಹಿಂದಣ ಜನ್ಮದಲ್ಲಿ ಹಲು ಸುಕೃತಂಗಳಂ ಮಾಡಿಕೊಂಡ ದೆಸೆಯಿಂದ ನೀವು ಹುಟ್ಟಿದಿರಯ್ಯ. ನೀವು ಮುಂದಕ್ಕೆ ಶಿವಭಕ್ತಿ ದೊಡ್ಡಿತ್ತೆಂದು ನಂಬಲರಿಯದೆ ಭ್ರಮಿತರಾಗಿ ಘನತರಸುಖವಂ ನೀಗಿ ಭಕ್ತಿಪಾಶದೆಶೆಯೊಳು ಇರಲೊಲ್ಲದೆ ಹಿಂದಣ ಅರಿಕೆಯಂ ಮರೆದು ಮುಂದಣ ಅರಿಕೆಯಂ ತೊರೆದು ಕಂಡ ಕಂಡ ಹಂದಿಯೊಳಾಡಿ ನರಕವ ತಿಂಬಂತೆ ಬೆಂದ ಸಂಸಾರವೆಂಬ ಹೃದಯಕೂಪದೊಳು ಮುಳುಗಾಡುವ ಲೋಕದ ಮಂದಿಯಂತೆ ಹೊನ್ನೆನ್ನದು ಹೆಣ್ಣೆನ್ನದು ಮಣ್ಣೆನ್ನದೆಂಬ ಭಿನ್ನಭಾವದೊಳು ಮನಸಂದು, ಹೆಂಡರಿಗಾಗಬೇಕು ಮಕ್ಕಳಿಗಾಗಬೇಕೆಂಬ ಭಂಡ ಮೂಕೊರೆಯ ಮೂಳಹೊಲೆಯರಿರಾ, ನೀವು ಕೇಳಿರೋ. ನೀವು ಶಿವಭಕ್ತರ ಬಸುರಲ್ಲಿ ಹುಟ್ಟಿ ಫಲವೇನು? ಮಾತಿಂಗೆ ಲಿಂಗವ ಕಟ್ಟಿದಿರಿ, ವರ್ತನೆಗೊಬ್ಬ ಗುರುವೆಂಬಿರಿ. ಆ ಗುರು ತೋರಿದ ಚರಲಿಂಗಕ್ಕೆ ಬೋನವಿಲ್ಲ, ಆಚಾರವಿಲ್ಲ. ಕೀಳು ದೈವದ ಬೆನ್ನೊಳು ಹರಿದಾಡುವ ನರಕಿಯ ಯಮನವರು ಕೊಂಡೊಯ್ದು ನಡುವಿಂಗೆ ಗಿರಿಕಿಯನಿಕ್ಕಿ ಮೆಟ್ಟಿ ಮೆಟ್ಟಿ ಬಿಗುವಾಗ ಹಲುಗಿರಿಕೊಂಡು ಹೋಗುವ ಮಾನವರು ಜಗದರಿಕೆಯಲ್ಲಿ, ನರಕದಲ್ಲಿ ಬೀಳುವದ ಕಂಡು ನಗುತಿರ್ದ ಎನ್ನೊಡೆಯನಂಬಿಗರ ಚೌಡಯ್ಯನು.