ಉರಿಯ ಮಡುವಿನಲ್ಲಿ ಒಂದು ಜಲದ ಕುಸುಮ ಹುಟ್ಟಿ,
ಹರಿಹರಬ್ರಹ್ಮಾದಿಗಳಿಗೆ ವಶವಲ್ಲ ನೋಡಾ.
ಆ ಕುಸುಮದ ಎಸಳಿನ ಕೂಟಸ್ಥಲದಲ್ಲಿ ಕಪ್ಪು,
ನಡುಮಧ್ಯದಲ್ಲಿ ತಮ ಕಪೋತವರ್ಣ,
ಅದರ ತುದಿಯಲ್ಲಿ ನಾನಾ ವರ್ಣದ ಛಾಯೆ ಕೂಡಿ ಅಳಿವುತ್ತಿಹುದು.
ಆ ಹೂವ ಒಂದೆ ಭೇದದಲ್ಲಿ ಕಿತ್ತು ಸದಾಶಿವಲಿಂಗದ ಪಾದದಲ್ಲಿರಿಸಲಾಗಿ,
ಪದಕ್ಕೆ ಹೊರಗೆಂದು ಮಕುಟದ ಮೇಲೇರಿತ್ತು.
ಇದು ಬಲ್ಲವರಾರು ಚೋದ್ಯವ ಹೇಳಿರಣ್ಣಾ!