ಮೂಳಿಯ ಮೊದಲಿನಲ್ಲಿ ಮೂವರು ಮಕ್ಕಳು ಹುಟ್ಟಿ.
ಒಬ್ಬ ಕಾಲಿನಲ್ಲಿ ಬಲ್ಲಿದ, ಒಬ್ಬ ಕೈಯ್ಯಲ್ಲಿ ಬಲ್ಲಿದ,
ಒಬ್ಬ ಬಾಯಲ್ಲಿ ಬಲ್ಲಿದ.
ಇಂತೀ ಮೂವರು ಮಕ್ಕಳು ಹೆತ್ತ ತಂದೆಯ ಆಳವಾಡುತ್ತಿರಲಾಗಿ,
ಇವರು ಎನಗೆ ಮಕ್ಕಳಲ್ಲಾಯೆಂದು ಹಗೆಯೆಂಬುದನರಿದು,
ಹಿರಿಯ ಮಗನ ಕಾಲ ಮುರಿದು,
ನಡುವಳ ಮಗನ ಕೈಯ್ಯ ಮುರಿದು,
ಕಿರಿಯ ಮಗನ ಬಾಯ ಮುಚ್ಚಿ ಗೋಣ ಮುರಿದು,
ಅವರು ಹಿಂಗಿ ನಾ ಬದುಕಿದೆನೆಂದು ತ್ರಿವಿಧದ ಸಂದ ಬಿಟ್ಟು,
ಸದಾಶಿವಮೂರ್ತಿಲಿಂಗದಲ್ಲಿಗೆ ಸಂದಿತ್ತು ಚಿತ್ತ.