Index   ವಚನ - 210    Search  
 
ವೇದಪಾಠಕ ಶಾಸ್ತ್ರವಿತ್ತು ಪುರಾಣಬಹುಶ್ರುತಿವಂತ ವಾಚಕ ಆಡಂಬರಭೇದಕ ಸಂಸ್ಕೃತ ಪ್ರಾಕೃತ ಅಪಭ್ರಂಶಿಕ ದೇಶಿಕ ಇವು ಮೊದಲಾದ ವಾಚಕ ಚಾರ್ವಾಕ ಮುಖಂಗಳಿಂದ ಹೋರುವ ಮಾಯಾವಾದದ ತೆರದವನಲ್ಲ. ಮೂಲಸಿದ್ಧಿ ರಸಸಿದ್ಧಿ ಅಂಜನಸಿದ್ಧಿ ಅದೃಶ್ಯೀಕರಣ ಕಾಯಸಿದ್ಧಿ ಇಂತೀ ಕುಟಿಲಂಗಳ ತೆರಕ್ಕಗೋಚರ, ಅಪ್ರಮಾಳ, ಅಂಗಲಿಂಗಸಂಬಂಧವಾದ ಶರಣನ ಇರವು ಎಂತೆಂದಡೆ: ಶಬ್ದ ಹತ್ತದ ಅಲೇಖದಂತೆ, ಅನಿಲ ಮುಟ್ಟದ ಕುಂಪಟೆಯಂತೆ, ಶ್ರುತಿ ಮುಟ್ಟದ ಕಡ್ಡಿಯಂತೆ, ಕೈಮುಟ್ಟದ ಗತಿಯಂತೆ, ನೆಯಿ ಮುಟ್ಟದ ದುಗ್ಧದಂತೆ, ಪವನ ಮುಟ್ಟದ ಪರ್ಣದಂತೆ ಭಾವ ಭ್ರಮೆಯೊಳಗಿದ್ದು ಇಲ್ಲದ ಶರಣನ ಇರವು, ಸದಾಶಿವಮೂರ್ತಿಲಿಂಗದ ಅಂಗವು ತಾನೆ.