ಕಾಯಹೇಯಸ್ಥಲವೆಂದು, ಜೀವಹೇಯಸ್ಥಲವೆಂದು,
ಭಾವಹೇಯಸ್ಥಲವೆಂದು,
ಇಂತಿವರೊಳಗಾದ ಸರ್ವಹೇಯಸ್ಥಲವೆಂದು ನುಡಿವಾಗ
ಜ್ಞಾನವೇತರ ನೆಮ್ಮುಗೆಯಿಂದ ರೂಪಾಯಿತ್ತು?
ತೊರೆಯ ಹಾವುದಕ್ಕೆ ಹರುಗೋಲು, ಲಘು ನೆಮ್ಮುಗೆಗಳಲ್ಲಿ ಹಾಯ್ದ ತೆರದಂತೆ,
ಅವು ಹೇಯವೆಂಬುದಕ್ಕೆ ತೆರಹಿಲ್ಲ.
ಅವು ತೊರೆಯ ತಡಿಯಲ್ಲಿಯ ಲಘು ಹರುಗೋಲು ಉಳಿದ ಮತ್ತೆ
ಅಡಿವಜ್ಜೆಗುಂಟೆ ಅವರ ಹಂಗು?
ತಾನರಿದಲ್ಲಿ ಅಹುದಲ್ಲವೆಂದು ಪಡಿಪುಚ್ಚವಿಲ್ಲ.
ತಾ ಸದ್ಯೋಜಾತಲಿಂಗದಲ್ಲಿ ನಾಶವಾಗಿ
ತನ್ನಲ್ಲಿ ವಸ್ತು ವಿನಾಶವಾದ ಕಾರಣ.