Index   ವಚನ - 55    Search  
 
ಮೃತ್ತಿಕೆಯ ಲವಣ ಸ್ವಯಂಪಾಕ, ಮಿಕ್ಕಾದ ಲವಣ ಅಪ್ಪುಭೇದ. ಸಪ್ಪೆಯ ವ್ರತ ನಿಶ್ಚಿಂತ, ಅದು ದೋಷನಾಶನ, ಇಂತೀ ಉಭಯ ವ್ರತವೆ ಕಟ್ಟು. ಮಿಕ್ಕಾದ ಅರುವತ್ತೆರಡು ಶೀಲ ಸ್ವತಂತ್ರಸಂಬಂಧ, ಅವು ಎಂಭತ್ತನಾಲ್ಕು ಲಕ್ಷ ಜೀವವ್ರತದ ಸಂಬಂಧ. ವ್ರತವ ಹಿಡಿದಲ್ಲಿ, ಆ ವ್ರತಕ್ಕೆ ಅನುಸರಣೆ ಬಂದಲ್ಲಿ, ಬಂದಿತು ಬಾರದೆಂಬ ಸಂದೇಹಕ್ಕೆ ಮುನ್ನವೆ ಆತ್ಮ ನಿರಂಗವಾಗಬಲ್ಲುದೊಂದೆ ವ್ರತ. ಮತ್ತೆ ಮಿಕ್ಕಾದವೆಲ್ಲವೂ ಸಂದಣಿಯ ತಗಹು, ಪರಿಸ್ಪಂದದ ಕೊಳಕು, ಲಂದಣಿಗರ ಬಂಧದ ಮಾತಿನ ಮಾಲೆ. ಇಂತೀ ಸಂಗ ದುಸ್ಸಂಗವನರಿತು ಹಿಂಗುವದ ಹಿಂಗಿ, ತನ್ನ ಸಂಗಸುಖಕ್ಕೆ ಬಂದುದ ಕೂಡಿಕೊಂಡು, ವ್ರತಭಂಗಿತನಲ್ಲದೆ ನಿರುತ ಸ್ವಸಂಗಿಯಾದ ಸರ್ವಾಂಗಸಂಬಂಧ ಶೀಲವಂತಂಗೆ, ಬೇರೊಂದುವಿಲ್ಲ, ಏಲೇಶ್ವರಲಿಂಗವು ತಾನೆ.