Index   ವಚನ - 23    Search  
 
ಪೃಥ್ವಿ ಸಕಲವ ಧರಿಸಿಕೊಂಡಿಪ್ಪಂತೆ ಶಿವಶರಣ ಸಮಾಧಾನಿಯಾಗಿರಬೇಕಯ್ಯಾ. ಅಪ್ಪುವಿನ ನಿರ್ಮಳದಂತೆ ಶಿವಶರಣ ನಿರ್ಮಳನಾಗಿರಬೇಕಯ್ಯಾ. ಪಾವಕನು ಸಕಲದ್ರವ್ಯಂಗಳ ದಹಿಸಿಯು ಲೇಪವಿಲ್ಲದ ಹಾಂಗೆ ಶಿವಶರಣ ನಿರ್ಲೇಪನಾಗಿರಬೇಕಯ್ಯಾ. ವಾಯು ಸಕಲದ್ರವ್ಯಂಗಳಲ್ಲಿಯು ಸ್ಪರ್ಶನವ ಮಾಡಿಯು ಆ ಸಕಲದ ಗುಣವ ಮುಟ್ಟದ ಹಾಂಗೆ ಶಿವಶರಣ ಸಕಲಭೋಗಂಗಳನು ಭೋಗಿಸಿಯು ಸುಗಂಧ ದುರ್ಗಂಧಂಗಳನು ಮುಟ್ಟಿಯು ನಿರ್ಲೇಪಿಯಾಗಿರಬೇಕಯ್ಯ! ಆಕಾಶವು ಸಕಲದಲ್ಲಿ ಪರಿಪೂರ್ಣವಾಗಿಹ ಹಾಂಗೆ ಶಿವಶರಣ ಸಕಲದಲ್ಲಿ ಪರಿಪೂರ್ಣನಾಗಿರಬೇಕಯ್ಯಾ. ಇಂದುವಿನಂತೆ ಶಿವಶರಣ ಸಕಲದಲ್ಲಿ ಶಾಂತನಾಗಿರಬೇಕಯ್ಯಾ. ಭಾನುವು ತಮವನಳಿಸಿ ಪ್ರಕಾಶವ ಮಾಡುವ ಹಾಂಗೆ ಶಿವಶರಣ ಅವಿದ್ಯವ ತೊಲಗಿಸಿ ಸುವಿದ್ಯವ ಮಾಡಬೇಕಯ್ಯಾ. ಇದು ಕಾರಣ, ಸದ್ಗುರುಪ್ರಿಯ ಸಿದ್ಧಸೋಮನಾಥಾ, ನಿಮ್ಮ ಶರಣ ನಿರ್ಲೇಪನಯ್ಯಾ.